ಪೊದರು
ಪೊದರು ಹಲವಾರು ಕೊಂಬೆಗಳಿಂದ ಕೂಡಿದ್ದು, 5-6 ಮೀಟರ್ ಎತ್ತರವಿದ್ದು ಮರಗಳಿಗಿಂತ ಭಿನ್ನವಾಗಿದೆ. ಬೆಳೆಯುವ ಗುಣವನ್ನು ಅವಲಂಬಿಸಿ ಹಲವಾರು ಜಾತಿಯ ಮರಗಳು ಪೊದೆ ಅಥವಾ ಮರಗಳಾಗುತ್ತವೆ. ಅತೀ ಕುಳ್ಳ ಪೊದೆ 2 ಮೀ.ಗಿಂತ ಕಡಿಮೆ ಎತ್ತರವಿರುತ್ತದೆ. ಒಂದು ಪ್ರದೇಶದ ಅಥವಾ ಉದ್ಯಾನವನದಲ್ಲಿರುವ ಅನೇಕ ಪೊದರುಗಳನ್ನು ಕುರುಚಲ ತೋಪು ಎಂದು ಕರೆಯುತ್ತಾರೆ. ಹಲವು ಜಾತಿಯ ಪೊದರನ್ನು ಮೇಲಿನಿಂದ ಸವರಿದಾಗ ದಟ್ಟ ಎಲೆ ಮತ್ತು ಒತ್ತೊತ್ತಾಗಿ ಬೆಳೆಯುವ ಚಿಕ್ಕ ಕೊಂಬೆಗಳನ್ನು ಬಿಡುತ್ತದೆ. ಅಗಲ ಎಲೆಯ ಪೊದರಿನ ಗಿಡಗಳನ್ನು ಸಾಮಾನ್ಯವಾಗಿ ಹೂತೋಟದಲ್ಲಿ ಬೆಳೆಸುತ್ತಾರೆ.
ಸಾಮಾನ್ಯ ಪೊದರು ಗಿಡಗಳು
1. ಆರ್ಟಿಮಿಸಿಯಾ
2. ಕಾಗದದ ಹೂವಿನ ಗಿಡ (ಬೊಗಾನ್‍ವಿಲ್ಲೆ)
3. ಕ್ಯಾಲಿಸ್ಸೆಮೋನ್ (ಬಾಟ್ಲ್ ಬ್ರಷ್)
4. ಕ್ಯಾರಿಯೋಪ್ಟೆರಿಸ್
5. ಡೆಂಡ್ರೋಮೆಕಾನ್
6. ಡ್ರಂಕೇನಾ
7. ಪ್ಯುಸಿಯಾ
8. ದಾಸವಾಳ
9. ಹೈಡ್ರಾಂಜಿಯ
10. ಮಲ್ಲಿಗೆ
11. ಜುನಿಪೆರಸ್
12. ಲೇಜರ್‍ಸ್ಟ್ರೋಮಿಯ
13. ಲಂಟಾನ
14. ಮಿರ್ಟಸ್
15. ನೆರಿಯಂ
16. ಒಲೇರಿಯಾ
17 ಒಸ್ಮಾಂಧಸ್
18. ಪೋನ್ಸಿರಸ್
19. ಗುಲಾಬಿ
20. ಸಾಲಿಕ್ಸ್
21 ತೂಜ
22. ಜಿಜಿಪಸ್
ಗಿಡ ನೆಡುವುದು
ಜಮೀನು ತಯಾರಿ: ಪೊದರಿನ ಬೆಳವಣಿಗೆಗೆ ಆಳವಾದ ಫಲವತ್ತಾದ ಮಣ್ಣು ಬೇಕು. ಗಟ್ಟಿ ಮಣ್ಣಾಗಿದ್ದರೆ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ. ಸಾಧಾರಣವಾಗಿ ಗಿಡ ನೆಡಲು 2 ಅಡಿ ಆಳ ಮತ್ತು 2 ಅಡಿ ಅಗಲದ ಗುಂಡಿ ತೋಡಲಾಗುತ್ತದೆ. ಗುಂಡಿಗಳನ್ನು 2-3 ವಾರ ತೆರೆದಿಟ್ಟ ನಂತರ ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣಿನ ಮಿಶ್ರಣದಿಂದ ತುಂಬಬೇಕು. ಮಣ್ಣು ಕಲ್ಲುಗಳಿಂದ ಕೂಡಿದ್ದರೆ ಬೇರೆಡೆಯಿಂದ ಉತ್ತಮ ಮಣ್ಣನ್ನು ತಂದು ತುಂಬಿ ನೀರುಣಿಸಬೇಕು. ಕೊಟ್ಟಿಗೆ ಗೊಬ್ಬರವಲ್ಲದೆ 25 ಗ್ರಾಂ ಯೂರಿಯ, 50 ಗ್ರಾಂ. ಸೂಪರ್ ಪಾಸ್ಫೇಟ್, 25 ಗ್ರಾಂ. ಪೊಟಾಷ್‍ನ್ನು ಗಿಡ ನೆಡುವ ಮೊದಲೆ ಪ್ರತಿ ಗುಂಡಿಗೆ ಹಾಕಬೇಕು.
ಗಿಡ ನೆಡುವ ಸಮಯ: ಸಾಮಾನ್ಯವಾಗಿ ಸದಾ ಹಸಿರಿರುವ ಪೊದರಿನ ಗಿಡವನ್ನು ಮಳೆಗಾಲದಲ್ಲಿ ನಾಟಿ ಮಾಡಲಾಗುತ್ತದೆ. ಗಿಡದಿಂದ ಗಿಡಕ್ಕೆ 5.15 ಅಡಿ ಅಂತರವಿಡಲಾಗುತ್ತದೆ. ಹೆಚ್ಚಾಗಿ ರಸ್ತೆ, ಕಾಲುದಾರಿ ಬದಿಯಲ್ಲಿ ಗಿಡಗಳನ್ನು ಬೆಳಸಲಾಗುವುದು.
ಸಸ್ಯಾಭಿವೃದ್ಧಿ: ಬೀಜ, ಕಡ್ಡಿ, ಲೇಯರ್ ವಿಧಾನ ಮತ್ತು ಕಂದುಗಳ ಮೂಲಕ ಸಸ್ಯಾಭಿವೃದ್ಧಿ ಮಾಡಲಾಗುತ್ತದೆ. ಬೀಜಗಳನ್ನು ನೇರವಾಗಿ ಗುಂಡಿಯಲ್ಲಿ ಅಥವಾ ಪ್ಲಾಸ್ಟಿಕ್ ತೊಟ್ಟಿಗಳಲ್ಲಿ ಬಿತ್ತಲಾಗುತ್ತದೆ.
ಕಡ್ಡಿಗಳು (ಕಟ್ಟಿಂಗ್ಸ್): ಕಡ್ಡಿಗಳ ಮುಖಾಂತರ ಸಸ್ಯಾಭಿವೃದ್ಧಿ ಮಾಡುವುದು ಹೆಚ್ಚು ಜನಪ್ರಿಯವಾಗಿದೆ. ಕಡ್ಡಿಗಳನ್ನು ಪ್ಲಾಸ್ಟಿಕ್ ತೊಟ್ಟಿಗಳಲ್ಲಿ ನೆಟ್ಟು ಚಿಗುರು ಬರಿಸಲಾಗುತ್ತದೆ. ಬೇರು ಬಿಟ್ಟ ನಂತರ ಗಿಡಗಳನ್ನು ನೆಡುವ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ. ಕೆಲವು ವೇಳೆ ಲೇಯರಿಂಗ್ ವಿಧಾನ ಮತ್ತು ಕಂದುಗಳ ಮುಖಾಂತರ ಸಸ್ಯಾಭಿವೃದ್ಧಿ ಮಾಡಲಾಗುತ್ತದೆ.
ಕಳೆ ನಿರ್ವಹಣೆ ಮತ್ತು ನೀರಾವರಿ: ಪೊದರಿನ ಬೆಳವಣಿಗೆಗೆ ಮತ್ತು ಅಂದ ಕಾಣಲು ಕೈಯಿಂದ ಕಳೆ ನಿರ್ಮೂಲನೆ ಮಾಡಲಾಗುತ್ತದೆ. ಬೆಳವಣಿಗೆಯಲ್ಲಿ ನೀರಿನ ಪಾತ್ರ ಪ್ರಾಮುಖ್ಯವಾದುದು. ನೀರೊದಗಿಸುವುದು ವಾಯುಗುಣ, ಮಣ್ಣು ಮತ್ತು ಗಿಡಗಳ ಪ್ರಕಾರವನ್ನು ಅವಲಂಬಿಸಿದೆ.
ಗೊಬ್ಬರ ಮತ್ತು ರಸಗೊಬ್ಬರಗಳು: ಕ್ರಮಬದ್ಧವಾದ ಸಾವಯವ ಗೊಬ್ಬರ ಮತ್ತು ರಸಗೊಬ್ಬರದ ಬಳಕೆ ಉತ್ತಮ ಬೆಳವಣಿಗೆಗೆ ಅವಶ್ಯವಾಗಿದೆ. ಪ್ರತೀ ಗಿಡಕ್ಕೆ ಸಾಧಾರಣವಾಗಿ 100 ಗ್ರಾಂ. ಯೂರಿಯ, 200 ಗ್ರಾಂ. ಸಿಂಗಲ್ ಸೂಪರ್‍ಪಾಸ್ಫೇಟ್ ಮತ್ತು 50 ಗ್ರಾಂ. ಪೊಟಾಷ್ ರಸಗೊಬ್ಬರವನ್ನು ಪ್ರತೀ ಗಿಡಕ್ಕೆ ಅವಶ್ಯವಾಗಿದೆ. ಮುಂಗಾರು ಮತ್ತು ಹಿಂಗಾರಿನಲ್ಲಿ ವರ್ಷಕ್ಕೆ 2 ಬಾರಿ ಗಿಡಗಳಿಗೆ ಗೊಬ್ಬರ ಹಾಕಬೇಕು.
ಗಿಡ ಸವರುವುದು: ಗಿಡ ಸವರುವುದರಿಂದ ಪೊದರಿಗೆ ಬೇಕಾದ ಆಕಾರ ಮತ್ತು ಗಾತ್ರವನ್ನು ಕೊಡಬಹುದು. ಮೇಲ್ಬಾಗದಿಂದ ಸವರುವುದರಿಂದ ಎಲೆಗಳು ದಟ್ಟ ಮತ್ತು ಕೊಂಬೆಗಳು ಒತ್ತೊತ್ತಾಗಿ ಬೆಳೆಯುತ್ತವೆ. ಹಾನಿಗೊಳಗಾದ ರೋಗಪೀಡಿತ ಕೊಂಬೆಗಳನ್ನು ಕತ್ತರಿಸಬೇಕು.
ರೋಗ ಮತ್ತು ಕೀಟಬಾಧೆ: ಸಾಮಾನ್ಯವಾಗಿ ಎಲೆ ತಿನ್ನುವ ಕೀಟ, ಗೆದ್ದಲು ಹುಳು ಪೊದರಿನ ಗಿಡಗಳಿಗೆಹಾನಿ ಮಾಡುತ್ತದೆ. ಆದ್ದರಿಂದ ಇವುಗಳ ನಿವಾರಣೆ ಅತೀ ಅಗತ್ಯ. ಕ್ಲೋರ್‍ಪೈರಿಫಾಸ್ ಬಳಸುವುದರಿಂದ ಗೆದ್ದಲು ಹುಳುವನ್ನು ನಿಯಂತ್ರಿಸಬಹುದು. ಮೆಟೋಸಿಸ್ಟಾಕ್ಸ್ ಕೀಟನಾಶಕ ಅಥವಾ ಇನ್ನಿತರ ಕೀಟನಾಶಕ ಬಳಸಿ ಎಲೆ ತಿನ್ನುವ ಕೀಟವನ್ನು ನಿಯಂತ್ರಿಸಬಹುದು.