ಮರ
ಮರಗಳು ಕ್ರಮಬದ್ಧವಲ್ಲದ ಹೂತೋಟದ ಒಂದು ಅಂಗವಾಗಿದೆ. ನೆರಳಿಗಾಗಿ ಸಾಲು ಸಾಲಾಗಿ ಮರಗಳನ್ನು ರಸ್ತೆ ಬದಿಯಲ್ಲಿ ನೆಡಲಾಗುತ್ತದೆ. ಮರಗಳು ಹೂತೋಟದ ಮತ್ತು ರಸ್ತೆಯ ಅಂದ ಹೆಚ್ಚುವುದಲ್ಲದೆ ಮಾಲಿನ್ಯ ನಿಯಂತ್ರಣ, ಮಣ್ಣಿನ ಸವಕಳಿ ತಡೆಯುತ್ತದೆ. ಹಾಗು ಹಣ್ಣು, ಮೇವು ಮತ್ತು ಉರುವಲು ಕೊಡುತ್ತದೆ. ಮರಗಳನ್ನು 2 ವಿಭಾಗವಾಗಿ ವಿಂಗಡಿಸಬಹುದು. ಅವುಗಳೆಂದರೆ,
1. ಆಕರ್ಷಣೀಯ ಎಲೆಗಳುಳ್ಳ ಮರಗಳು
2. ಆಕರ್ಷಣೀಯ ಹೂಗಳುಳ್ಳ ಮರಗಳು
ಮರಗಳನ್ನು ನೆಡುವಾಗ ಸಾಲು/ಮಾದರಿ ವಿವಿಧ ಬಣ್ಣದ ಹೂ ಮರಗಳ ಮಿಶ್ರಣದಿಂದ ಕೂಡಿರಬೇಕು. ವಿವಿಧ ಮರಗಳನ್ನು ನೆಡಲು ಆಯ್ಕೆ ಮಾಡುವಾಗ ವಾಯುಗುಣ ಮತ್ತು ಮಣ್ಣಿನ ಗುಣಗಳನ್ನು ಗಮನದಲ್ಲಿಡಬೇಕು. ಒಣ ಮತ್ತು ಮರಳು ಮಣ್ಣಿಗೆ ಕ್ಯಾಸುರಿನ, ಜಂಗಲ್ ಜಾಲೆಬಿ, ಅಮಲ್ಟಾಸ್, ಸಿಡ್ರೆಲ್ಲಾ ಮುಂತಾದ ಮರಗಳನ್ನು ಆಯ್ಕೆ ಮಾಡಬೇಕು. ಕಲ್ಲು ಮಿಶ್ರಿತವಾದ ಮಣ್ಣಿನಲ್ಲಿ ಬೇವು, ಹುಣಸೆ, ಬೇಕನ್, ಅಮಲ್ಟಾಸ್ ಮುಂತಾದ ಮರಗಳನ್ನು ನೆಡಬಹುದು. ಹೆಚ್ಚು ಆದ್ರ್ರತೆ ಮತ್ತು ಮಳೆ ಬೀಳುವ ಪ್ರದೇಶದಲ್ಲಿ ಸಿಲ್ವರ್, ಬಾಟಲ್ ಬ್ರಷ್, ಸ್ಪತೋಡಿಯಾ, ಸಿಲ್ಕ್ ಕಾಟನ್ ಕ್ಯಾಸುರಿನಾ, ಅಮಲ್ಟಾಸ್, ಬಹುಮಿಯಾ ಮುಂತಾದ ಮರಗಳನ್ನು ಆಯ್ಕೆ ಮಾಡಬೇಕು.
ಗಾತ್ರ ಮತ್ತು ಬಿಡುವ ಹೂಗಳನ್ನು ಆಧರಿಸಿ ಮರಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ
ಎ) ಗಾತ್ರ ಆಧರಿಸಿದ ವರ್ಗೀಕರಣ
• ದೊಡ್ಡ ಗಾತ್ರದ ಮರಗಳು: ಬೇವು, ಸಿಲ್ಕ್ ಕಾಟನ್, ಗೋಳಿಮರ, ಪೋಲಿಯಾಲ್ತಿಯ, ಸಿಲ್ವರ್, ಬೆನ್‍ಮೆಟಿಕ್ ಮರಗಳು ದೊಡ್ಡ ಗಾತ್ರದವು.
• ಮಧ್ಯಮ ಗಾತ್ರದ ಮರಗಳು: ಬಹುಮಿಯ, ಕ್ಯಾಸಿಯ, ಸೆಡ್ರೆಲಾ, ಗುಲ್‍ಮೊಹರು, ಪಾನುವಾಳ ಮುಂತಾದವು ಮಧ್ಯಮ ಗಾತ್ರದ ಮರಗಳು.
• ಚಿಕ್ಕ ಮರಗಳು: ಅಕೇಸಿಯಾ, ಕ್ಯಾಸಿಯ, ಪ್ಲುಮೇರಿಯಾ, ಸಂಪಿಗೆ ಇವುಗಳು ಚಿಕ್ಕ ಗಾತ್ರದ ಮರಗಳು.
ಬಿ) ಅಂದದ ಆಧಾರದ ವರ್ಗೀಕರಣ
• ಹೂಗಳು: ಆಲಿಸ್ಟೋನಿಯ, ಅಮಲ್ಟಾಸ್, ಕ್ಯಾಸಿಯ ತಳಿ, ಬಹುಮಿಯ, ಡೆಲಿನಿಕ್, ಸಂಪಿಗೆ, ಜಕರಾಂಡ, ಮೋಲ್‍ಶಿ, ಬಾಟಲ್‍ಬ್ರಷ್, ಪ್ರೈಡ್ ಆಫ್ ಇಂಡಿಯ ಮುಂತಾದವು.
• ಎಲೆಗಳು: ಜುನಿಫರ್ ಕ್ಯಾಸುರಿನ, ಸಾಲಿಕ್ಸ್, ನೀಲಗಿರಿ, ದಿಯೋದರ್, ಪಾರ್ಕಿಯ, ಅಕೇಸಿಯಾ, ಅಶೋಕ, ಕ್ರಿಸ್‍ಮಸ್ ಮರ ತುಜಾ ಮುಂತಾದವು.
ಗಿಡ ನೆಡುವುದು
ದೊಡ್ಡ ಗಾತ್ರದ ಮರಗಳನ್ನು 10-12 ಮೀಟರ್ ಅಂತರದಲ್ಲಿ ನೆಟ್ಟರೆ ಸಣ್ಣ ಗಾತ್ರದ ಮರಗಳನ್ನು 5-6 ಮೀಟರ್ ಅಂತರದಲ್ಲಿ ನೆಡಬೇಕು. ರಸ್ತೆ ಬದಿಯಲ್ಲಿ 2 ಅಥವಾ 3 ಸಾಲಿನಲ್ಲಿ ಗಿಡ ನೆಡಬೇಕು. ಹೂ ತೋಟದಲ್ಲಿ 1x1x1 ಮೀಟರ್ ಗಾತ್ರದ ಗುಂಡಿಗಳನ್ನು ಗಿಡ ನೆಡುವುದಕ್ಕಿಂತ 1 ವಾರ ಮೊದಲೆ ತಗೆದಿಟ್ಟಿರಬೇಕು. ಮೇಲ್ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರದಿಂದ ಗುಂಡಿಯನ್ನು ಮುಚ್ಚಬೇಕು. ಗೆದ್ದಲುಗಳ ಬಾಧೆಯಿದ್ದರೆ ಕೀಟನಾಶಕವಾದ ಥಿಮೆಟ್ ಮತ್ತು ಫ್ಯುರಡಾನ್ ಪುಡಿಯನ್ನು ಬಳಸಬೇಕು.
ಗಿಡ ನೆಡುವ ಸಮಯ
ಸದಾ ಹಸಿರೆಲೆಯ ಸಸಿಗಳನ್ನು ಮಳೆಗಾಲದಲ್ಲಿ (ಜುಲೈ-ಆಗಸ್ಟ್) ನಲ್ಲಿ ನೆಡಬೇಕು. ಎಲೆ ಉದುರಿಸುವ ಗಿಡಗಳನ್ನು ಜನವರಿ-ಫೆಬ್ರವರಿಯಲ್ಲಿ ನೆಡಬೇಕು. ಗಿಡ ನೆಟ್ಟ ನಂತರ ಹಗುರವಾಗಿ ನೀರು ಹಾಯಿಸಬೇಕು.
ನಿರ್ವಹಣೆ
ಹೂ ತೋಟ ಮತ್ತು ರಸ್ತೆ ಬದಿಗಳಲ್ಲಿ ನೆಟ್ಟ ಮರಗಳನ್ನು ಜನರು ಉಪಯೋಗಿಸುತ್ತಾರೆ. ಕೆಲವೊಮ್ಮೆ ಪ್ರಾಣಿಗಳು ಮರಗಳಿಗೆ ಹಾನಿ ಉಂಟು ಮಾಡಬಹುದು. ರಸ್ತೆ ಬದಿಯ ಮರಗಳಿಗೆ ರಕ್ಷಣೆ ಒದಗಿಸಬೇಕು. ರಕ್ಷಣೆಗಾಗಿ ಇಟ್ಟಿಗೆ, ತಂತಿಬಲೆ, ಬಿದಿರಿನ ಕಡ್ಡಿ ಮೊದಲಾದವುಗಳನ್ನು ಉಪಯೋಗಿಸಬಹುದು. ಗಿಡ ನೆಟ್ಟ ಪ್ರಾರಂಭದ ವರ್ಷಗಳಲ್ಲಿ ಗಿಡಗಳಿಗೆ ನೀರು ಹಾಕಿ ಪೋಷಣೆ ಮಾಡಬೇಕು.
ಮರಸವರುವುದು: ಸಾಧಾರಣವಾಗಿ ಮರಗಳನ್ನು ಸವರುವುದಿಲ್ಲ. ಆಕಾರ ಉದ್ಧೇಶಕ್ಕಾಗಿ ಬಳಸುವಲ್ಲಿ ಮರವನ್ನು ಸವರಿ ಕಂಬದ ಅಥವಾ ಗುಮ್ಮಟದ ಆಕಾರವನ್ನು ಕೊಡಲಾಗುತ್ತದೆ.
ರೋಗ ಮತ್ತು ಕೀಟಬಾಧೆ: ಗೆದ್ದಲು, ಇಲಿ ಮತ್ತು ಬೇರು ಕೊಳೆಯುವಿಕೆಯಿಂದ ಬೇರಿಗೆ ಹಾನಿಯಾಗುತ್ತದೆ. ಮರ ಬೆಳೆಯಲು ಅವುಗಳ ನಿಯಂತ್ರಣ ಅವಶ್ಯ. ಗೆದ್ದಲು ಹುಳುವನ್ನು ನಿಯಂತ್ರಿಸಲು ಕ್ಲೋರುಪೈರಿಫಾಸ್ ಅನ್ನು ಬಳಸಬಹುದು. ಉತ್ತಮ ಚರಂಡಿ ವ್ಯವಸ್ಥೆಯಿಂದ ಬೇರು ಕೊಳೆ ರೋಗ ಕಡಿಮೆಯಾಗಬಹುದು.