ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು

ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು

ಸೆಪ್ಟಂಬರ್‌-2, ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತಿ ಪ್ರಯುಕ್ತ ವಿಶೇಷ ಲೇಖನ:

  ಕೇರಳದಲ್ಲಿನ ಮನುಷ್ಯ-ಮನುಷ್ಯರ ಮಧ್ಯೆ ಜಾತಿ ತಾರತಮ್ಯಗಳನ್ನು ಕಡಿಮೆ ಮಾಡಲು ಇಡೀ ಜೀವನವನ್ನು ಮುಡಿಪಾಗಿಟ್ಟವರು ಶ್ರೀ ನಾರಾಯಣ ಗುರುಗಳು. ಕೇರಳ ಸಮಾಜದಲ್ಲಿನ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೆ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡವರು ಶ್ರೀ ನಾರಾಯಣ ಗುರುಗಳು. ಜಗತ್ತಿನಲ್ಲಿರುವುದು “ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು” ಎಂಬ ತತ್ವವನ್ನು ಪ್ರತಿಪಾದಿಸಿದವರು ಶ್ರೀ ನಾರಾಯಣ ಗುರುಗಳು. ಕೇರಳದಲ್ಲಿ ಅತಿ ಹೆಚ್ಚು ಸಾಮಾಜಿಕ ಬದಲಾವಣೆಗಳನ್ನು ಮಾಡಿದ ವ್ಯಕ್ತಿ ಎಂದರೆ ಅದು ಬ್ರಹ್ಮಶ್ರೀ ನಾರಾಯಣ ಗುರುಗಳು.
ಮೇಲು ಜಾತಿಯೆಂದು ಪರಿಗಣಿಸಿಕೊಂಡವರಿಂದ 19ನೇ ಶತಮಾನದಲ್ಲಿ ಕೇರಳದ ಬಹುಸಂಖ್ಯಾತ ಜನಾಂಗದವರು ಅಸ್ಪೃಶ್ಯ ಎಂದು ಪರಿಗಣಿಸಿರುವ ವರ್ಗಕ್ಕೆ ಸೇರಿದವರಾಗಿದ್ದು, ದೇವಾಲಯದಲ್ಲಿ ಅವರಿಗೆ ಪ್ರವೇಶವಿರಲಿಲ್ಲ. ದೇವಾಲಯಗಳಿಗೆ ಮೇಲು ಜಾತಿಯವರು ನಡೆಯುವ ದಾರಿಯಲ್ಲಿ ಅವರು ನಡೆಯುವಂತಿರಲಿಲ್ಲ. ಅಸ್ಪೃಶ್ಯ ಎಂದು ಪರಿಗಣಿಸಿರುವ ಮಹಿಳೆಯರು ಆಭರಣ ಧರಿಸುವಂತಿರಲಿಲ್ಲ, ಅಂದವಾಗಿ ತಲೆ ಬಾಚುವಂತಿರಲಿಲ್ಲ, ಹೂ ಮುಡಿಯುವಂತಿರಲಿಲ್ಲ, ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ ಮತ್ತು ಕುಪ್ಪಸ್ಸವನ್ನು ಕೂಡ ತೊಡುವಂತಿರಲಿಲ್ಲ, ಅವಿದ್ಯೆಯಿಂದಾಗಿ ಸಾಮಾಜಿಕವಾಗಿ ಕ್ರೂರ ಶೋಷಣೆಗೆ ಒಳಗಾದ ಕೆಳವರ್ಗದವರಿಗೆ ತಮ್ಮ ದುಃಸ್ಥಿತಿಯ ಅರಿವೂ ಕೂಡಾ ಇರಲಿಲ್ಲ. ಈ ಮೌಢ್ಯತೆಯನ್ನು ಕಂಡ ಸ್ವಾಮಿ ವಿವೇಕಾನಂದರೇ “ಕೇರಳವೊಂದು ಹುಚ್ಚರ ಆಸ್ಪತ್ರೆ ” ಎಂಬ ಉದ್ಘಾರ ತೆಗೆದಿದ್ದರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಮಹಾಭಾರತದಲ್ಲಿ ಶ್ರೀ ಕೃಷ್ಣನು ಪ್ರಪಂಚದಲ್ಲಿ “ಅಧರ್ಮ ಯಾವಾಗ ಹೆಚ್ಚಾಗುತ್ತೋ, ಅದನ್ನು ಮಟ್ಟ ಹಾಕಿ ಧರ್ಮವನ್ನು ಪುನರ್‌ ಸ್ಥಾಪಿಸಲು ನಾನು ಮತ್ತೆ ಮತ್ತೆ ಜನ್ಮ ತಾಳುತ್ತೇನೆ” ಎಂಬುದಾಗಿ ಹೇಳುತ್ತಾರೆ. ಭಾರತದ ನೆಲದಲ್ಲಿ ಅಶಾಂತಿ, ದೌರ್ಜನ್ಯ, ಮತಾಂತರ ಹೀಗೆ ನಮ್ಮ ಆಚಾರ ಪರಂಪರೆಗೆ ಧಕ್ಕೆಯಾದ ಸಂದರ್ಭದಲ್ಲಿ ಅನೇಕ ಯುಗ ಪುರುಷರು ಜನ್ಮ ತಾಳಿದ್ದಾರೆ. ಹಾಗೆ ಜನಿಸಿದವರಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳು ತಮ್ಮದೆ ಆದ ರೀತಿಯಲ್ಲಿ ದುಷ್ಟ ಪದ್ಧತಿಗಳನ್ನು ಹೋಗಲಾಡಿಸಿ ಜನತೆಯನ್ನು ಉದ್ಧರಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಸಮಾಜದಲ್ಲಿ ಸುಧಾರಣೆ ತರಲು ಯತ್ನಿಸಿ, ಹಿಂದು ಧರ್ಮ ಸಂಸ್ಕೃತಿಗಳನ್ನು ರಕ್ಷಿಸಿ ಕೆಳವರ್ಗದವರನ್ನು ಮೇಲೆತ್ತಿದ ಮಹಾನ್‌ ಸಂತ ಶ್ರೀ ನಾರಾಯಣ ಗುರುಗಳು.

  ೧೮೫5ನೇ ಯ ಇಸವಿಯ ಕೇರಳದಲ್ಲಿ ಒಣಂ ಹಬ್ಬದ ಮೂರನೆಯ ಚದಯಂ ದಿನ ಶತಭಿಷ ನಕ್ಷತ್ರದ ಹುಣ್ಣಿಮೆಯ ಶುಭ ಸಂದರ್ಭದಂದು ʻಮಾಡಾನ್ ಆಶಾನ್ʼ ಮತ್ತು ʻಕುಟ್ಟಿ ಅಮ್ಮಾಳ್ʼ ದಂಪತಿಯ ಕೊನೆಯ ಪುತ್ರನಾಗಿ ವಿಶ್ವ ಮಾನವತೆಯ ಹರಿಕಾರನೆಂದು ಎಲ್ಲೆಡೆ ಪರಿಗಣಿಸಲ್ಪಟ್ಟ, ದೀನ-ದಲಿತರಿಗೆ, ಅಸ್ಪ್ರಶ್ಯರಿಗೆ ಬದುಕಿನ ಹೊಸ ಭರವಸೆಯನ್ನು ಒದಗಿಸಿ ಕೊಟ್ಟ ಶ್ರೀ ನಾರಾಯಣ ಗುರು ಮಹಾನ್ ಸಂತನ ಜನನವಾಯಿತು . ಶ್ರೀ ಗುರುಗಳ ಬಾಲ್ಯದ ಹೆಸರು ” ನಾಣು” ಎಂದಾಗಿತ್ತು. ಅವರು ತನ್ನ ಅತಿ ಕಿರಿಯ ವಯಸ್ಸಿನಲ್ಲಿಯೇ ಅಗಾಧವಾದ ಪಾಂಡಿತ್ಯವನ್ನು ಪಡೆದಿದ್ದು, ಸದಾ ಆಧ್ಯಾತ್ಮಿಕ ಚಿಂತೆಯಲ್ಲಿಯೇ ಮಗ್ನನಾಗಿರುತ್ತಿದ್ದರು. ಮನುಕುಲದ ಸಂತಸವೆ ದೇವರಿಗೆ ಪೂಜೆ ಎಂದು ಬಾಲ್ಯದಲ್ಲಿಯೇ ದೇವರಿಗೆ ಇರಿಸಿದ್ದ ಹಣ್ಣು ಹಂಪಲುಗಳನ್ನು ತಿಂದು ತೇಗಿ ಸಂತಸಪಡುತ್ತಿದ್ದರಂತೆ “ಮನುಷ್ಯನ ಹೊಟ್ಟೆ ತುಂಬಿ ತೃಪ್ತಿಯಾದರೆ ದೇವರು ಸಿಟ್ಟಾಗುತ್ತಾನೇನು? ಅವನಿಗೆ ಅದರಿಂದ ಸಂತೋಷವಾಗುತ್ತದೆ” ಎಂದೆನ್ನುತ್ತಿದ್ದನಂತೆ. ಮೇಲು ಜಾತಿಯವರನ್ನು ಬೇಕೆಂದೆ ಮುಟ್ಟಿ “ಈಗ ನಿಮ್ಮ ಜಾತಿ ಹೋಗಿ ಬಿಡ್ತಾ ಎಲ್ಲಿ ಕಾಣಿಸೋದಿಲ್ಲ” ಎಂದು ಕೈ ತಟ್ಟಿ ನಗುತ್ತಿದ್ದ ನಾಣುವಿಗೆ ಚಿಕ್ಕಂದಿನಿಂದಲೆ ಬಡವರು ನೊಂದವರು ಅಂದರೆ ಆತ್ಮೀಯತೆ ಹಾಗೂ ಭೌತಿಕ ಸುಖಗಳ ಕಡೆಗೆ ನಿರಾಸಕ್ತಿ. ಕೇರಳದಲ್ಲಿ ಜಾತಿ, ಮತ-ಭೇದಗಳು ಅದರ ನಡುವೆ ಅಸ್ಪ್ರಶ್ಯತೆ ಹೆಚ್ಚಾಗಿದ್ದ ಕಾಲದಲ್ಲಿ, ಶ್ರೀ ನಾರಾಯಣ ಗುರು ಅವತರಿಸುತ್ತಾರೆ. ನಂತರದ ದಿನಗಳಲ್ಲಿ ಸಮಾಜದಲ್ಲಿ ಬೇರೂರಿದ್ದ ಅಸ್ಪ್ರಶ್ಯತೆಯ ವಿರುದ್ಧ ಹೋರಾಟಕ್ಕೆ ತಮ್ಮ ಜೀವನವನ್ನೇ ಮೀಸಲಿಡುತ್ತಾರೆ.

  ಬಾಲ್ಯದಲ್ಲಿ ಶಿಕ್ಷಣ ಕಲಿತು ಸಂಸ್ಕೃತ ಜ್ಞಾನ ಪಡೆದಿದ್ದ ಇವರು, ಸಂಸ್ಕೃತ ಶ್ಲೋಕವನ್ನು ಸರಾಗವಾಗಿ ಹಾಡುತ್ತಿದ್ದರು. ನಂತರ ದಿನಗಳಲ್ಲಿ ಗುರುಗಳು ಆಧ್ಯಾತ್ಮಿಕ ಜ್ಞಾನಕ್ಕಾಗಿ ಕಾಡು ಮೇಡು ಅಲೆದಾಡುವುದನ್ನು ಕಂಡ ಮನೆಯವರಿಗೆ ಇದು ವಿಚಿತ್ರವೆನಿಸಿತು. ನಾಣುವಿಗೆ ಮದುವೆ ಮಾಡಿ ಸಂಸಾರದ ಬಂಧನದಲ್ಲಿರಿಸುವ ಮನೆಯವರ ಪ್ರಯತ್ನ ವ್ಯರ್ಥವಾಯಿತು. ಮನೆಯವರು ಕರೆತಂದ ಮದುಮಗಳಿಗೆ(ಅಂದಿನ ಕಾಲದಲ್ಲಿ ಮದುಮಗಳನ್ನು ಮನೆಯವರೆ ನೋಡಿ ಇಷ್ಟಪಟ್ಟು ಕರೆತರುವ ಸಂಪ್ರದಾಯವಿತ್ತು.) ʻನಾವೆಲ್ಲ ಬೇರೆ ಬೇರೆ ಉದ್ದೇಶಕ್ಕೆ ಹುಟ್ಟಿದ್ದೇವೆ; ನಿಮ್ಮ ದಾರಿ ಬೇರೆ ನನ್ನ ದಾರಿ ಬೇರೆ ನಿಮ್ಮ ದಾರಿಯಲ್ಲಿ ಮುನ್ನಡೆಯುವುದರಿಂದ ನಿಮಗೆ ಹಿತವಾಗಬಹುದು, ನನ್ನ ದಾರಿಯಲ್ಲಿ ಹೋಗಲು ನನ್ನನ್ನು ದಯಮಾಡಿ ಬಿಟ್ಟು ಬಿಡಿʼ ಎಂದು ಮನೆಯನ್ನು ಬಿಟ್ಟು ಹೊರನಡೆದಿದ್ದ. ತದನಂತರ ಬ್ರಹ್ಮ ಸತ್ಯದ ಶೋಧಕನಾಗಿ ಸುತ್ತಾಡಿದರು. ಕಾಡಿನಲ್ಲಿ, ಗುಹೆಗಳಲ್ಲಿ ನಿರಾತಂಕವಾಗಿ ಓಡಾಡಿ ತಮಿಳುನಾಡಿನ ಮರುತ್ವ ಮಲೆಯಲ್ಲಿ ಧಾನ್ಯ ಮಗ್ನರಾಗಿರುತ್ತಿದ್ದಾಗ ಅವರ ಅಕ್ಕಪಕ್ಕದಲ್ಲಿ ಎರಡು ಚಿರತೆಗಳು ಅಂಗರಕ್ಷಕರಂತೆ ನಿಂತಿರುತ್ತಿದ್ದವಂತೆ.

  ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ಘೋಷಣೆಯ ಮೂಲಕ ಸಾಮಾಜದಲ್ಲಿ ಕ್ರಾಂತಿಗೆ ನಾಂದಿ ಹಾಡಿದವರು ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳು. ಜನರು ಶೋಷಣೆಗಳಿಂದ ಮುಕ್ತರಾಗಲು, ಜೀವನ ಸುಧಾರಿಸಲು ಸಂಘರ್ಷಕ್ಕಿಂತ ಭಿನ್ನವಾದ ಚಳವಳಿಯನ್ನು ಮುನ್ನಡೆಸಿದರು. ಕ್ರಿ.ಶ ೧೮೮೮ ರ ಶಿವರಾತ್ರಿಯ ದಿನದಂದು ಅರವಿ ಪುರಂನಲ್ಲಿ ಮೊಟ್ಟಮೊದಲು ಶಿವಾಲಯವನ್ನು ಸ್ಥಾಪಿಸುವ ಮೂಲಕ ಸ್ಥಾಪಿತ ಹಿತಾಸಕ್ತಿಗಳ ಶೋಷಣೆಯ ವ್ಯವಸ್ಥೆಯ ವಿರುದ್ಧ ಮೊದಲ ಏಟು ನೀಡಿದರು.
ಅರವಿಪುರಂನಲ್ಲಿ ದೇವಾಲಯವನ್ನು ಸ್ಥಾಪಿಸಿ ದಲಿತ ಜನಾಂಗಕ್ಕೆ ದೇವಾಲಯವನ್ನು ಪ್ರವೇಶಿಸುವ ಹಾಗೂ ಪೂಜೆಗೈಯುವ ವ್ಯವಸ್ಥೆಯನ್ನು ಕಲ್ಪಿಸಿದ ಹಾಗೆಯೇ, ಕ್ರಿ.ಶ. ೧೯೧೨ ರಂದು ಮಂಗಳೂರಿನ ಕುದ್ರೋಳಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠೆ ಮಾಡಿ, ಶ್ರೀ ಗೋಕರ್ಣನಾಥೇಶ್ವರ ದೇವಾಲಯವನ್ನು ಸ್ಥಾಪಿಸಿದರು. ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಒಟ್ಟು 86 ದೇವಾಲಯಗಳ ಸ್ಥಾಪನೆಗೆ ಗುರುಗಳು ಕಾರಣೀಬೂತರಾದರು.

ಶೋಷಿತರಿಗಾಗಿಯೇ ಪ್ರತ್ಯೇಕ ಶಿವ ದೇವಾಲಯ ಸ್ಥಾಪಿಸುತ್ತಿದ್ದ ನಾರಾಯಣ ಗುರುಗಳಿಗೆ ನಂಬೂದರಿ ಬ್ರಾಹ್ಮಣರು ಆಕ್ಷೇಪ ವ್ಯಕ್ತಪಡಿಸಿ; ಕೆಳಜಾತಿಯ ಈಳವ ಗುರುವೊಬ್ಬನಿಗೆ ಶಿವ ದೇವಾಲಯ ಸ್ಥಾಪನೆಯ ಅಧಿಕಾರವಿದೆಯೇ? ಎಂದು ಪ್ರಶ್ನಿಸಿದ್ದರು. ಆಗ ಶ್ರೀ ನಾರಾಯಣ ಗುರುಗಳು “ನಮ್ಮ ಶಿವನು ಈಳವ ಶಿವನಾಗಿದ್ದು, ಬ್ರಾಹ್ಮಣಶಿವನಲ್ಲ…” ಎಂದು ಸ್ವಾರಸ್ಯಕರವಾದ ಉತ್ತರವನ್ನು ನೀಡಿದ್ದರು. ಶಿವನು ಯಾವ ಜಾತಿಗೂ ಸೇರಿದವನಲ್ಲ. ಶಿವತತ್ವ ತಿಳಿಯುವ ಹಕ್ಕು ಯಾವುದೇ ಜಾತಿಯ ಗುತ್ತಿಗೆಯಲ್ಲ ಎಂಬ ಅವರ ತಿರುಗೇಟು ತೀಕ್ಷ್ಣವಾಗಿತ್ತು.
ಅದ್ವೈತ ತತ್ವವನ್ನು ಒಪ್ಪಿ, ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಗುರುಗಳು ಪ್ರಗತಿಪರ ಧೋರಣೆಯೊಂದಿಗೆ ದೇವಾಲಯಗಳನ್ನು ಸ್ಥಾಪಿಸಿದರು. ದೇವಸ್ಥಾನಗಳು ಮನುಷ್ಯನ ವ್ಯಕ್ತಿತ್ವದ ವಿಕಾಸ ಹಾಗೂ ಆಧ್ಯಾತ್ಮಿಕ ಸಾಧನೆಯ ಕೇಂದ್ರವಾಗಬೇಕೆಂದು ಶ್ರಮಿಸಿದರು. ತಾವು ಸ್ಥಾಪಿಸಿದ ಶಾಲೆಗಳಲ್ಲಿ ಎಲ್ಲ ವರ್ಗದ ಜನರಿಗೂ ಶಾಸ್ತ್ರಪೂಜೆ ಹಾಗು ಅರ್ಚನಾ ವಿಧಿಗಳನ್ನು ಕಲಿಯುವ ಅವಕಾಶ ಕಲ್ಪಿಸಿದರು. ಆದಿ ಶಂಕರರು ಅದ್ವೈತ ತತ್ವವನ್ನು ಪ್ರತಿಪಾದನೆ ಮಾಡಿದರು. ಆದರೆ ಶ್ರೀ ನಾರಾಯಣ ಗುರುಗಳು ಅದ್ವೈತ ತತ್ವವನ್ನು ಮನುಷ್ಯ ಜೀವನದಲ್ಲಿ ಕಾರ್ಯರೂಪಕ್ಕೆ ತಂದರು. ಇದು ಜಗತ್ತಿನ ಇತಿಹಾಸದಲ್ಲೇ ಒಂದು ಮೈಲಿಗಲ್ಲಾಗಿದೆ.

ಕೇರಳ ರಾಜ್ಯದ ಸಾಮಾಜಿಕ ದುಸ್ಥಿತಿಯನ್ನು ಕಂಡ ಸ್ವಾಮಿ ವಿವೇಕಾನಂದರು ಡಾ| ಪಲ್ಪು ಎಂಬ ಈಡಿಗ ಜನಾಂಗದ ಗಣ್ಯರಿಂದ ಅರಿತು ಡಾ| ಪಲ್ಪುರವರಿಗೆ ಒಂದು ಗಂಭೀರ ಸಲಹೆಯನ್ನು ಮುಂದಿಡುತ್ತಾರೆ; ʻನೀವು ನಿಮ್ಮ ಜನಾಂಗದವರಾದ ಚಾರಿತ್ರ್ಯವಂತನೂ, ಯೋಗ್ಯನೂ ಆದ ವ್ಯಕ್ತಿಯನ್ನು ಮಾರ್ಗದರ್ಶಕನಾಗಿ ಮಾಡಿಕೊಂಡು ಆತನನ್ನು ಅನುಸರಿಸುವುದು ಹೆಚ್ಚು ಕ್ಷೇಮ ಎಂದೆನಿಸುತ್ತದೆ. ಆಗ ನಿಮ್ಮ ಬಹಳಷ್ಟು ಸಮಸ್ಯೆಗಳು ಪರಿಹಾರ ಕಾಣುತ್ತವೆ!ʼ ಎಂಬ ಸ್ವಾಮೀಜಿಯವರ ಸಲಹೆಯನ್ನು ಜವಾಬ್ದಾರಿಯುತವಾಗಿ ಸ್ವೀಕರಿಸಿ ಕಾರ್ಯೋನ್ಮುಖರಾದ ಡಾ| ಪಲ್ಪು ಯೋಗ್ಯ ವ್ಯಕ್ತಿಗಾಗಿ ತೀವ್ರ ಹುಡುಕಾಟ ನಡೆಸಿ ಶ್ರೀ ನಾರಾಯಣ ಗುರುಗಳನ್ನು ಕಂಡುಕೊಂಡರು. ಮುಂದಿನ ದಿನಗಳಲ್ಲಿ ಶ್ರೀ ನಾರಾಯಣ ಗುರುಗಳು ಹಿಂದುಳಿದ ಜನಾಂಗದವರ ಏಳಿಗೆಗಾಗಿ ಶ್ರಮಿಸಿ ಪ್ರಸಿದ್ಧರಾದರು. ಡಾ| ಪಲ್ಪುರವರು ಮೈಸೂರು ಸಂಸ್ಥಾನದ ದಿವಾನರಾಗಿದ್ದರು.
“ಕೇರಳದ ನಾರಾಯಣ ಗುರುಗಳಿಗೆ ಸರಿಸಮಾನರಾದ ಮಹಾಪುರುಷನನ್ನು ನಾನು ಎಲ್ಲೂ ಕಂಡಿಲ್ಲ” ಎಂದು ವಿಶ್ವಕವಿ ರವಿಂದ್ರನಾಥ ಠಾಗೂರರು ಉದ್ಗರಿಸಿದ್ದರು. ಗಾಂಧೀಜಿಯವರು ತಮ್ಮ ಹರಿಜನೋದ್ಧಾರಕ್ಕಾಗಿ ಸ್ಫೂರ್ತಿ ಪಡೆದದ್ದು ಶ್ರೀ ನಾರಾಯಣ ಗುರುಗಳಿಂದ ಎಂದು ನುಡಿದ್ದಿದ್ದರು. “ಶ್ರೀ ನಾರಾಯಣ ಗುರುಗಳ ಸಾಮಾಜಿಕ ಕಾರ್ಯಕ್ರಮಗಳಿಗೂ ಗಾಂಧೀಜಿಯವರ ಸಾಮಾಜಿಕ ಚಟುವಟಿಕೆಗಳಿಗೂ ಬಹಳಷ್ಟು ಹೋಲಿಕೆ ಇರುವುದನ್ನು ನಾವು ಕಾಣಬಹುದು” ಎಂದು ರೋಮನ್ ರಾಲೆಂಡ್ ಉದ್ಗರಿಸಿದ್ದಾರೆ.

ಬ್ರಹ್ಮ ಋಷಿ ಶ್ರೀ ನಾರಾಯಣ ಗುರುಗಳು ತಮ್ಮ ಸಮಾಜ ಸುಧಾರಣೆಯಿಂದಾಗಿ ದುಷ್ಟ ಪದ್ಧತಿಗಳಿಂದ ಜನತೆಯನ್ನು ಉದ್ಧರಿಸಲು ಜೀವನದ ಕೊನೆಯವರೆಗೂ ನಿಸ್ವಾರ್ಥ ಸೇವೆಯನ್ನು ಮಾಡಿದ್ದಾರೆ. ಅನೇಕ ಸುಧಾರಣೆ ತರಲು ಯತ್ನಿಸಿ, ಧರ್ಮ ಸಂಸ್ಕೃತಿಗಳನ್ನು ರಕ್ಷಿಸಿಸುವ ಮಹದೋಪಕಾರ ಮಾಡಿದ್ದಾರೆ. ಈ ಮಹಾತ್ಮರ ಪುಣ್ಯ ಕಾರ್ಯಗಳಿಂದ ನಮ್ಮ ಸಮಾಜ ಇಂದಿಗೂ ಬಲಿಷ್ಠವಾಗಿದೆ. ಇದರಿಂದ ನಾವೆಲ್ಲರೂ ಶ್ರೀ ನಾರಾಯಣ ಗುರುಗಳ ತತ್ವ, ಸಿದ್ದಂತಾ ಮತ್ತು ಆದರ್ಶಗಳನ್ನು ಮುಂದುವರಿಸಿಕೊಂಡು ಹೋಗುವ ಕೆಲಸವಾಗಬೇಕಾಗಿದೆ. ಇಂತಹ ಮಹಾನ್ ಚೇತನವೊಂದನ್ನು ಗುರುವಾಗಿ ಪೂಜಿಸುವುದು ನಮ್ಮೆಲ್ಲರ ಭಾಗ್ಯ. ಅವರು ಕೇವಲ ಈಳವ ಅಥವಾ ಬಿಲ್ಲವ ಜನಾಂಗಕ್ಕೆ ಸೀಮಿತವಾದರೆ ಅವರ ತತ್ವಗಳಿಗೆ ಅನ್ಯಾಯವಾಗುತ್ತದೆ. ಇನ್ನೂ ಮುಖ್ಯವಾಗಿ ಗುರುವನ್ನು ಕೇವಲ ಮೂರ್ತಿ ಮಾಡಿ ಕೇವಲ ಕಲ್ಲಿಗೆ ಪೂಜೆ ಸಲ್ಲುವಂತಾಗದಿರಲಿ. ಅವರ ಸಂದೇಶಗಳನ್ನು ಮೈಗೂಡಿಸಿಕೊಂಡು ನಮ್ಮಲ್ಲಿ ಅಳವಡಿಸಿಕೊಳ್ಳೋಣ. ಸಾಧ್ಯವಾದಷ್ಟು ಅವರು ಹೇಳಿಕೊಟ್ಟ ಶಾಂತಿ ಪಥದಲ್ಲಿ ನಡೆಯೋಣ. ಆ ದಾರಿಯಲ್ಲಿ ನಡೆದು ಕೃತಾರ್ಥರಾಗಲು ಪ್ರಯತ್ನಿಸೋಣ. ಶ್ರೀ ನಾರಾಯಣ ಗುರುಗಳು ಕೇವಲ ಒಂದು ಜನಾಂಗದ ಗುರುವಲ್ಲ, ಮಾನವ ಜನಾಂಗದ ಗುರು, ವಿಶ್ವ ಮಾನವ ಗುರು, ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯ ಹರಿಕಾರರು.

ಈ ಮಹಾನ್ ಕ್ರಾಂತಿಕಾರಿ ಸಂತ ಮತ್ತು ಸಾಮಾಜಿಕ ಸುಧಾರಕ ಶ್ರೀ ನಾರಾಯಣ ಗುರುಗಳ ಜನ್ಮಸ್ಥಳವು ಕೇರಳದ ತಿರುವನಂತಪುರಂನಿಂದ 7 ಮೈಲಿ ದೂರದಲ್ಲಿರುವ ಚೆಂಬಳಂತಿ ಎಂಬ ಗ್ರಾಮವಾಗಿದ್ದು, ಇಂದಿಗೂ ಅಲ್ಲಿ ಅವರು ಜನಿಸಿದ ಮನೆಯನ್ನು ಹಾಗೆಯೇ ಸಂರಕ್ಷಿಸಿ ಇಡಲಾಗಿದೆ. ಶ್ರೀ ನಾರಾಯಣ ಗುರುಗಳು ಸಣ್ಣ ಗುಡಿಸಲಿನಂತಹ ಮನೆಯಲ್ಲಿ ಜನಿಸಿದರೂ, ಇಂದು ವಿಶ್ವ ವಿಖ್ಯಾತರಾದ ಬ್ರಹ್ಮ ಋಷಿಗಳಾಗಿದ್ದಾರೆ.

✍. ಕಾನತ್ತಿಲ್ ರಾಣಿ ಅರುಣ್

ಕಾನತ್ತಿಲ್‌ ರಾಣಿ ಅರುಣ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments