ಹುಲ್ಲು ಹಾಸು
ಹುಲ್ಲು ಹಾಸನ್ನು ಉದ್ಯಾನದ ಹೃದಯವೆಂದು ಕರೆಯಬಹುದು ಮತ್ತು ರಾಜನ ಆಸ್ಥಾನಕ್ಕೆ ಹೋಲಿಸಲಾಗುತ್ತದೆ. ರಾಜನ ಸುತ್ತ ಇತರ ದೂತರು ಕುಳಿತ ಹಾಗೆ ಹುಲ್ಲು ಹಾಸಿನ ಸುತ್ತ ವಿವಿಧ ಹೂಗಿಡಗಳನ್ನು ನೆಡಲಾಗುವುದು. ಹುಲ್ಲು ಹಾಸಿನಿಂದ ಉದ್ಯಾನದ ಅಂದವು ಹೆಚ್ಚುವುದು.
ಸದಾ ಹಸಿರಾಗಿ ಇರುವ ದಟ್ಟವಾಗಿ ಬೆಳೆದ ಹುಲ್ಲಿನ ಗುಂಪಿನ ಸ್ಥಳವನ್ನು ಹುಲ್ಲುಹಾಸು ಎಂದು ಕರೆಯುವರು. ಚೆನ್ನಾಗಿ ಬೆಳೆದ ಹುಲ್ಲು ಹಾಸನ್ನು ಮಖಮಲ್ಲು ರತ್ನಕಂಬಳಿಗೆ ಹೋಲಿಸುತ್ತಾರೆ. ಸುಂದರ ಹುಲ್ಲು ಹಾಸನ್ನು ನೋಡುವುದು ಮತ್ತು ಸ್ಪರ್ಶಿಸುವುದರಿಂದ ಮನಸಿಗೆ ಮುದ ನೀಡುತ್ತದೆ.
ಹುಲ್ಲಿನ ಆಯ್ಕೆ
ಉತ್ತಮ ಹುಲ್ಲು ಸಮಾನ ರಚನೆ ಹೊಂದಿದ್ದು ಯಾವುದೇ ಒತ್ತಡಗಳನ್ನು ತಾಳಿಕೊಂಡು ಬೆಳೆಯಬೇಕು. ಭಾರತದಲ್ಲಿ ಸಾಮಾನ್ಯವಾಗಿ ಗರಿಕೆ ಹುಲ್ಲನ್ನು ಹುಲ್ಲು ಹಾಸಿನಲ್ಲಿ ಬಳಸುತ್ತಾರೆ. ಉದ್ದನೆಯ ದಪ್ಪಗಿನ ಕೆಂಪಾದ ದಂಟು ಹೊಂದಿದ ಭೂಮಿಯಲ್ಲಿ ಹರಿಯುತ್ತಾ ಬೆಳೆಯುವ ಗರಿಕೆ ಹುಲ್ಲಿಗೆ ಅಗಲ ಮತ್ತು ಒರಟು ಎಲೆಗಳಿವೆ. ಇವು ಹುಲ್ಲು ಹಾಸಿಗೆ ಯೋಗ್ಯವಲ್ಲ. ಇನ್ನೊಂದು ರೀತಿಯ ಗರಿಕೆ ಹುಲ್ಲು ನೀರಿನಲ್ಲಿ ಮುಳುಗಿ ಎಲೆಗಳು ಕೊಳೆತು ಹೋದರೂ ಗೆಡ್ಡೆಗಳ ಮುಖಾಂತರ ಬದುಕುಳಿಯುತ್ತದೆ. ನೀಲಿ ಮಿಶ್ರಿತ ಹಸಿರು ಹುಲ್ಲು ಅಥವಾ ಕೊರಿಯಾದ ಹುಲ್ಲು ಇತ್ತೀಚೆಗೆ ಭಾರತದಲ್ಲಿ ಪರಿಚಯಿಸಲ್ಪಟ್ಟಿದೆ. ಎಲೆಗಳು ತೆಳುವಾಗಿದ್ದು ಹುರಿಗಳಿಂದ ಕೂಡಿದ ರಚನೆಯಿಂದಾಗಿದೆ. ಅತೀ ಒತ್ತಾಗಿ ಬೆಳೆಯುವುದರಿಂದ ಇತರ ಗಿಡಗಳಿಗೆ ಬೆಳೆಯಲು ಅವಕಾಶ ನೀಡುವುದಿಲ್ಲ.
ಮಣ್ಣು ಮತ್ತು ಸ್ಥಳ
ಹುಲ್ಲ ಹಾಸು ಬೆಳೆಸಲು ಸಾವಯವ ಭರಿತ ಜೇಡಿ ಮಣ್ಣು ಸೂಕ್ತ. ಕೊಟ್ಟಿಗೆ ಗೊಬ್ಬರ, ಸುಣ್ಣ ಮತ್ತು ಮರಳು ಬಳಸಿ ಜೇಡಿ ಮಣ್ಣಿನಲ್ಲಿ ಸಹ ಹುಲ್ಲನ್ನು ಬೆಳೆಯಬಹುದು. ಮರಳು ಮಣ್ಣು ಮತ್ತು ಕಲ್ಲು ಮಿಶ್ರಿತ ಮಣ್ಣಿನಲ್ಲಿ ಹುಲ್ಲು ಹಾಸು ಬೆಳೆಯಲು ಸಾಕಷ್ಟು ಸಾವಯವ ಗೊಬ್ಬರ ಹರಡುವುದು ಅಗತ್ಯವಾಗಿದೆ. ಹುಲ್ಲುಹಾಸಿಗೆ ದಿನವಿಡೀ ಸೂರ್ಯನ ಬೆಳಕು ಬೀಳುವ ಮೇಲಿನಿಂದ ಸ್ವಲ್ಪ ಇಳಿಜಾರಿರುವ ಸ್ಥಳವಾಗಿರಬೇಕು. ಇದರಿಂದ ನೀರು ಸರಾಗವಾಗಿ ಬಸಿದು ಹೋಗುತ್ತದೆ. ಮನೆಯ ಮುಂಭಾಗದ ಹುಲ್ಲು ಹಾಸು ಕಟ್ಟಡಕ್ಕೆ ಮುಟ್ಟಿಕೊಂಡಿರಬೇಕು ಮತ್ತು ಮೊಗಸಾಲೆಯಿಂದ ಸುಲಭವಾಗಿ ಕಾಣುವಂತಿರಬೇಕು.
ಸ್ಥಳ ತಯಾರಿ
ಒಮ್ಮೆ ಹುಲ್ಲು ನೆಟ್ಟರೆ ಅನೇಕ ವರ್ಷಗಳವರೆಗೆ ಇರುತ್ತದೆಯಾದ್ದರಿಂದ ಮಣ್ಣನ್ನು ಉತ್ತಮವಾಗಿ ಹದಗೊಳಿಸಿ ಹುಲ್ಲು ಚೆನ್ನಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು. 25 ಸೆ.ಮೀ. ನಷ್ಟು ಆಳದವರೆಗೆ ಅಗೆದು ಮಣ್ಣಿನ ಹಿಂಟೆಯನ್ನು ಒಂದು ತಿಂಗಳಿನವರೆಗೆ ಬಿಸಿಲಿಗೆ ಒಡ್ಡಿದ ನಂತರ ಪುಡಿ ಮಾಡಬೇಕು. ಈ ರೀತಿಯಿಂದ ಮಣ್ಣಿನಲ್ಲಿರುವ ಕಳೆಗಳು, ಕೀಟಗಳ ಮೊಟ್ಟೆ, ಲಾರ್ವ ಮತ್ತು ಪ್ರೌಢ ಕೀಟಗಳು ಹಾಗು ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ. ಸಾಕಷ್ಟು ನೀರು ಹಾಯಿಸುವುದರಿಂದ ಮಣ್ಣು ಕುದುರಿಕೊಳ್ಳುತ್ತದೆ. ಹದಿನೈದು ದಿನದ ನಂತರ ಇನ್ನೊಮ್ಮೆ ನೀರು ಹಾಯಿಸುವುದರಿಂದ ಸ್ಥಳದಲ್ಲಿರುವ ಏರು ತಗ್ಗುಗಳು ಗೋಚರಿಸುತ್ತವೆ. ಮೊಳಕೆಯೊಡೆದ ಇತರ ಗಿಡಗಳನ್ನು ಕಿತ್ತು ಹಾಕಿ, ಮಣ್ಣು ಒಣಗಿದ ನಂತರ ಜಾಗವನ್ನು ಸಮಮಟ್ಟವಾಗಿಸಬೇಕು. ಕೊಳೆತ ಕೊಟ್ಟಿಗೆ ಗೊಬ್ಬರದೊಡನೆ ಮಿಶ್ರಣ ಮಾಡಿದ ಮೂಳೆಗೊಬ್ಬರವನ್ನು ಮಣ್ಣಿನ ಮೇಲ್ಪದರದಲ್ಲಿ ಸಮಾನವಾಗಿ ಹರಡಿ ಮಣ್ಣಿನೊಡನೆ 10-15 ಸೆ.ಮೀ. ಆಳದಲ್ಲಿ ಮಿಶ್ರಣ ಮಾಡಬೇಕು. ಕೊಟ್ಟಿಗೆ ಗೊಬ್ಬರದಲ್ಲಿರುವ ಕಳೆಯ ಬೀಜಗಳು ನೀರು ಹಾಯಿಸುವುದರಿಂದ ಮೊಳಕೆಯೊಡೆಯುತ್ತದೆ. ಇದನ್ನು ಕೈಯಿಂದ ಬೇರು ಸಮೇತ ಕಿತ್ತು ತೆಗೆಯಬೇಕು ಅಥವಾ ಕಳೆನಾಶಕವನ್ನು ಬಳಸಬೇಕು. ಕುಂಟೆಹೊಡೆದು, ಸಮತಟ್ಟಾಗಿಸಿ ಹುಲ್ಲು ನಾಟಿಮಾಡಲು ತಯಾರು ಮಾಡಬೇಕು.
ಹುಲ್ಲು ನೆಡುವುದು
ಮಳೆಗಾಲದ ಪ್ರಾರಂಭದಲ್ಲಿ ಹುಲ್ಲು ಹಾಸನ್ನು ನೆಡಬೇಕು. ಹುಲ್ಲು ಹಾಸು ನೆಡಲು ಅನೇಕ ವಿಧಾನಗಳಿವೆ.
1. ಬೀಜದ ಮೂಲಕ
ಹುಲ್ಲು ಹಾಸು ಬೆಳೆಸಲು ಇದು ಸಾಮಾನ್ಯ ವಿಧಾನ. ಮಣ್ಣನ್ನು ಕುಂಟೆ ಹೊಡೆದು ಕೈಯಿಂದ ಅಥವಾ ಯಂತ್ರವನ್ನು ಬಳಸಿ ಬೀಜ ಬಿತ್ತನೆ ಮಾಡಿ ಒಣ ಹುಲ್ಲಿನಿಂದ ಮುಚ್ಚಬೇಕು. ಈ ಕೆಲಸವನ್ನು ಮಳೆಗಾಲದ ಪ್ರಾರಂಭದಲ್ಲಿ ಮಾಡಬೇಕು. ಒಂದು ವಾರದಲ್ಲಿ ಬೀಜ ಮೊಳಕೆಯೊಡೆದು ಸ್ವಲ್ಪವೇ ಸಮಯದಲ್ಲಿ ಸಸಿಗಳು ಹುಲ್ಲಿನ ಮುಚ್ಚಳಿಕೆಯ ಮೇಲೆ ಕಂಡು ಬರುತ್ತದೆ. ಸ್ವಲ್ಪ ಸಮಯದ ನಂತರ ಹುಲ್ಲು ಕೊಳೆತು ಸಾವಯವ ಗೊಬ್ಬರವಾಗುತ್ತದೆ.
2. ಹುಲ್ಲನ್ನು ಹರಡುವುದು ಮತ್ತು ಅಂಟಿಸುವುದು
ಆಯ್ದ ಹುಲ್ಲನ್ನು ಚಿಕ್ಕ ಚಿಕ್ಕ ತುಂಡಾಗಿ ಕತ್ತರಿಸಬೇಕು. ಕತ್ತರಿಸಿದ ಹುಲ್ಲನ್ನು ಹುಲ್ಲುಹಾಸು ಬೆಳೆಸಲು ತಯಾರು ಮಾಡಿದ ಜಾಗದಲ್ಲಿ ಸಮಾನವಾಗಿ ಹರಡಬೇಕು. ನಂತರ ಹುಲ್ಲಿನ ಮುಚ್ಚಳಿಕೆ ಹೊದಿಸಬೇಕು. ನೀರು ಹಾಯಿಸಿದಾಗ ಹುಲ್ಲಿನ ತುಂಡುಗಳು ಮಣ್ಣಿನಲ್ಲಿ ಕುದುರಿಕೊಂಡು ಒಂದು ವಾರದಲ್ಲಿ ಬೇರು ಕೊಡುತ್ತವೆ. ಹೊಸ ಚಿಗುರುಗಳು ಮೂಡಲು ಪ್ರಾರಂಭಿಸುತ್ತದೆ.
3. ಡಿಬ್ಲಿಂಗ್
ಹುಲ್ಲು ಹಾಸಿನಿಂದ ಬೇರು ಸಮೇತವಾಗಿ ಸಂಗ್ರಹಿಸಿದ ಅಥವಾ ಇತರೆಡೆಯಿಂದ ತಂದ ಹುಲ್ಲನ್ನು ಬಿಡಿಯಾಗಿ ಬಿಡಿಸಿ 5-6 ಹುಲ್ಲಿನ ದಂಟನ್ನು ಸೇರಿಸಿ ಸನಿಕೆ ಅಥವಾ ಕುರ್ಪಿಯ ಸಹಾಯದಿಂದ ನಾಟಿ ಮಾಡಿ ಬುಡದಲ್ಲಿ ಮಣ್ಣನ್ನು ಸೇರಿಸಿ ಗಟ್ಟಿ ಮಾಡಬೇಕು. ನೆಟ್ಟ ನಂತರ ನೀರೊದಗಿಸಬೇಕು ಸಾಮಾನ್ಯವಾಗಿ 15-15 ಸೆ.ಮೀ ಅಂತರದಲ್ಲಿ ನಾಟಿಮಾಡುತ್ತಾರೆ.
4. ಹುಲ್ಲು ಹಾಸುವುದು
30 ರಿಂದ 45 ಸೆ.ಮೀ ಅಳತೆಯ ಹುಲ್ಲು ಹಾಸನ್ನು ಮಣ್ಣು ಸಮೇತ ಕತ್ತರಿಸಿ ತೆಗೆದು ಒಂದರ ಪಕ್ಕ ಒಂದರಂತೆ ಇಡಬೇಕು. ಇಟ್ಟನಂತರ ಹಗುರ ರೋಲರ್‍ನಿಂದ ಒತ್ತಿ ತೇವಾಂಶವಿರುವಂತೆ ನೋಡಿಕೊಳ್ಳಬೇಕು. ಅತ್ಯಂತ ಕಡಿಮೆ ಸಮಯದಲ್ಲಿ ಹುಲ್ಲು ಹಾಸು ತಯಾರಾದರೂ ಹೆಚ್ಚು ಖರ್ಚು ತಗಲುತ್ತದೆಯಲ್ಲದೆ ಹೆಚ್ಚು ಹುಲ್ಲು ಬೇಕಾಗುತ್ತದೆ
ದಿಡೀರ್ ಹುಲ್ಲು ಹಾಸು
ಕೆಲವೊಮ್ಮೆ ಹಸಿರು ಹೊದಿಕೆಯನ್ನು ಕೆಲವೇ ದಿನಗಳಲ್ಲಿ ತಯಾರು ಮಾಡುವುದು ಅವಶ್ಯವಿರುತ್ತದೆ. ಆದರೆ ಇದು ಕೆಲವೇ ದಿನಗಳವರೆಗೆ ಮಾತ್ರ ಬಾಳಿಕೆ ಇರುತ್ತದೆ. ಗೋಧಿ ಅಥವಾ ಭತ್ತದ ಬೀಜಗಳನ್ನು ಮಂದವಾಗಿ ಬಿತ್ತಬೇಕು. ಇದರ ಮೇಲೆ 2-3 ಸೆ.ಮೀ ದಪ್ಪದಲ್ಲಿ ಮಣ್ಣನ್ನು ಹರಡಬೇಕು. ಬೀಜ ಮೊಳಕೆ ಬಂದು ಸಸಿಗಳು 3-4 ಸೆ.ಮೀ ಎತ್ತರವಾಗಿರುವಾಗ ಯಂತ್ರದಿಂದ ಕತ್ತರಿಸಬೇಕು. ಹುಲ್ಲು ಹಾಸು ಪ್ರದರ್ಶನಕ್ಕೆ ತಯರಾಗುತ್ತದೆಯಾದರೂ ಬಹಳ ದಿನದವರೆಗೆ ಬಾಳುವುದಿಲ್ಲ.
ಹುಲ್ಲು ಹಾಸು ನಿರ್ವಹಣೆ
ಕಳೆ ನಿಯಂತ್ರಣ
ಪ್ರಾರಂಭದ ಹಂತದಲ್ಲಿ ಕಳೆಯನ್ನು ತೆಗೆಯುತ್ತಿರಬೇಕು. ಕಾನ್ಸ್ ಮತ್ತು ಬೆಳ್ಳುಳ್ಳಿ ಹುಲ್ಲು ಪ್ರಮುಖ ಕಳೆಗಳು. ಕಾನ್ಸನ್ನು ಹುಲ್ಲು ನಾಟಿ ಮಾಡುವ ಮೊದಲೇ ನಾಶಪಡಿಸಬೇಕು. ಬೆಳ್ಳುಳ್ಳಿ ಹುಲ್ಲಿನ ಗೆಡ್ಡೆಗಳನ್ನು ಮಣ್ಣು ಹದ ಮಾಡುವಾಗ ಕಿತ್ತು ತೆಗೆಯಬೇಕು ಮತ್ತು ಇತರ ಕಳೆ ಹಾಗು ವಾರ್ಷಿಕ ಕಳೆ ಗಿಡಗಳನ್ನು ಕೈಯಿಂದ ಕಿತ್ತು ತೆಗೆಯಬೇಕು.
ಹುಲ್ಲು ಕತ್ತರಿಸುವುದು
ಯಂತ್ರದಿಂದ ಹುಲ್ಲು ಕತ್ತರಿಸುವುದು ಉತ್ತಮ ಕಾರ್ಯವಾಗಿದ್ದು ಹುಲ್ಲು ಸುಸ್ಥಿತಿಯಲ್ಲಿರುತ್ತದೆ. ಕತ್ತರಿಸಲು ಇರುವ ದಿನಗಳ ಅಂತರ ಋುತುಮಾನ ಮತ್ತು ಹುಲ್ಲಿನ ತಳಿಯನ್ನು ಅವಲಂಬಿಸಿದೆ. ವಾಯುಗುಣ ಅನುಕೂಲಕರವಾಗಿರುವಾಗ ಹುಲ್ಲು ಬೇಗನೆ ಬೆಳೆಯುತ್ತದೆ ಮತ್ತು ಹುಲ್ಲನ್ನು ಆಗಾಗ ಕತ್ತರಿಸ ಬೇಕಾಗುತ್ತದೆ. ಮಳೆಗಾಲದಲ್ಲಿ ಹುಲ್ಲು ವೇಗವಾಗಿ ಬೆಳೆಯುವುದರಿಂದ ವಾರಕ್ಕೊಮ್ಮೆ ಕತ್ತರಿಸಬೇಕಾಗುತ್ತದೆ. ಅವಶ್ಯಕತೆಗನುಗುಣವಾಗಿ ಹುಲ್ಲು ಹಾಸನ್ನು ಕತ್ತರಿಸಬೇಕು. ಅಡ್ಡಾಡಲು, ಕುಳಿತುಕೊಳ್ಳಲು, ಔತಣಕೂಟ ಏರ್ಪಡಿಸಲು 2 ಸೆ.ಮೀ. ದಪ್ಪದ ಹುಲ್ಲು ಹಾಸು ಸಾಕು.
ಸಾವಯವ ಮತ್ತು ರಸಗೊಬ್ಬರ
ಪ್ರತೀ ಚದರ ಮೀಟರು ಪ್ರದೇಶಕ್ಕೆ ಕಳೆ ಬೀಜದಿಂದ ಮುಕ್ತವಾದ ಕೊಟ್ಟಿಗೆ ಗೊಬ್ಬರ ಮತ್ತು 100 ಗ್ರಾಂ ಬೇವಿನ ಹಿಂಡಿಯ ಪುಡಿಯನ್ನು ಹಾಕಿದ ನಂತರ ನೀರುಣಿಸಬೇಕು. ನಿಯಮಿತವಾಗಿ ರಸ ಗೊಬ್ಬರವನ್ನು ಒದಗಿಸುವುದರಿಂದ ಹಲ್ಲು ಹಾಸು ಹೊಳೆಯುವ ಹಸಿರು ಬಣ್ಣದಿಂದ ಕೂಡಿರುತ್ತದೆ. 10 ಚದರ ಮೀಟರ್ ಪ್ರದೇಶಕ್ಕೆ ಸಾರಜನಕವನ್ನು ಶೇಕಡ 2ರ 5 ಲೀಟರ್ ಯೂರಿಯ ದ್ರಾವಣದ ಮೂಲಕ ಒದಗಿಸಬೇಕು.
ಮರಳಿನ ಬಳಕೆ
ಕೆಮ್ಮಣ್ಣು ಅಥವಾ ಜೇಡಿ ಮಣ್ಣಿನಲ್ಲಿ ಬೆಳೆದ ಹುಲ್ಲು ಹಾಸು ಮಳೆಗಾಲದಲ್ಲಿ ಕೆಸರಿನಿಂದ ಉಪಯೋಗಿಸಲು ಯೋಗ್ಯವಿಲ್ಲದಾಗುತ್ತದೆ. ಇದನ್ನು ತಡೆಗಟ್ಟಲು ಮಣ್ಣಿನ ಮೇಲ್ಮೈಯಲ್ಲಿ ಒಂದು ಪದರ ದಪ್ಪ ಮರಳನ್ನು ಉದುರಿಸಬೇಕು.
ರೋಗ ಮತ್ತು ಕೀಟಬಾಧೆ
ಎರೆಹುಳ ರೈತ ಮಿತ್ರನಾದರೂ, ಹುಲ್ಲಿನ ಮೇಲೆ ಹಿಕ್ಕೆಗಳ ರಾಶಿಯಿಂದ ತೊಂದರೆ ಆಗುತ್ತದೆ. ಹುಲ್ಲು ಹಾಸು ಯಾವಾಗಲೂ ಬಳಕೆಯಲ್ಲಿರುವುದರಿಂದ ವಿಷಕಾರಿ ರಾಸಾಯನಿಕಗಳನ್ನು ಬಳಸಲು ಶಿಫಾರಸ್ಸು ಮಾಡಬಾರದು. 10 ಚ.ಮೀ. ಪ್ರದೇಶಕ್ಕೆ 500 ಗ್ರಾಂ ಬೇವಿನ ಅಥವಾ ಹೊಂಗೆಯ ಹಿಂಡಿಯನ್ನು ಹರಡಬೇಕು. ಇದರಿಂದ ಎರೆಹುಳ ಮತ್ತು ಗೆದ್ದಲು ಹುಳಗಳು ನಿಯಂತ್ರಣದಲ್ಲಿರುತ್ತದೆ. ಕೊರಿಯಾ ಹುಲ್ಲು ಬೇಗನೆ ಗೆದ್ದಲು ಹುಳು ಮತ್ತು ರಿಂಗ್ ರೋಗಕ್ಕೆ ತುತ್ತಾಗುತ್ತದೆ.ತೇವಾಂಶ ಹೆಚ್ಚಿರುವ ಕಾಲದಲ್ಲಿ 50-60 ಸೆ.ಮೀ ಅಗಲದ ಉಂಗುರಗಳು ಹುಲ್ಲಿನ ಸುತ್ತಲೂ ಕಂಡು ಬರುತ್ತದೆ. ಹುಲ್ಲನ್ನು ಕಾಪರ್ ಆಕ್ಸಿಕ್ಲೋರೈಡ್ (3 ಗ್ರಾಂ/ಲೀ) ಅಥವಾ ಡೈಥೇನ್ ಎಂ-45 (3 ಗ್ರಾಂ/ಲೀ) ಅಥವಾ ಬೆವಿಸ್ಟಿನ್ (1 ಮಿಲಿ/ಲೀ) ದ್ರಾವಣದಿಂದ ತೋಯ್ಸುವುದರಿಂದ ರೋಗ ನಿಯಂತ್ರಣದಲ್ಲಿರುತ್ತದೆ.