ಕೊಡಗು ಕ್ರೀಡಾ ಕಲಿಗಳ ಆವೃತ್ತಿಗಳಿಗೆ ಮುನ್ನುಡಿ ಬರೆದ “ಕೊಡವ ಕ್ರೀಡಾಕಲಿಗಳು”
ಕೊಡಗಿನ ಜನಪದ ಗೀತೆಗಳ ಜತೆಯಲ್ಲೇ ಸೂರ್ಯ ಚಂದ್ರರಿರುವವರೆಗೂ ತಳುಕು ಹಾಕಿಕೊಳ್ಳುವ ಹೆಸರು ನಡೇರಿಯಂಡ ಚಿಣ್ಣಪ್ಪ. ದಿ. ಚಿಣ್ಣಪ್ಪನವರು 1924 ಇಸವಿಯಲ್ಲಿ ಕೊಡಗಿನ ಜನಪದ ಗೀತೆಗಳಿಗೆ ಅಕ್ಷರ ರೂಪ ನೀಡಿ “ಪಟ್ಟೋಳೆ ಪಳಮೆ” ಹೆಸರಲ್ಲಿ ಕೃತಿಯನ್ನು ಲೋಕಾರ್ಪಣೆ ಮಾಡಿದ್ದರು. ಮತ್ತದು ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾಗಿ ಸ್ವಇಚ್ಛೆಯಿಂದ ಸಂಗ್ರಹಿತ ಜನಪದ ಗೀತಾಪುಸ್ತಕ ಎಂಬ ದಾಖಲೆ ಚಿಣ್ಣಪ್ಪನವರ ಹೆಸರಲ್ಲೇ ಇಂದಿಗೂ ಇದೆ. (ದಕ್ಷಿಣ ಭಾರತದ ಪ್ರಪ್ರಥಮ ಜನಪದ ಗ್ರಂಥ)
ಇಂದಿನ ಆಗುಹೋಗುಗಳ ದಾಖಲೆಗಳು ಭವಿಷ್ಯದಲ್ಲಿ ಬಗೆದು ತೆಗೆದು ಚರಿತ್ರೆಗೊಂದು ಚೌಕಟ್ಟನ್ನು ನಿರ್ಮಿಸುತ್ತಾ ಹೋಗುತ್ತದೆ. ಇಂದಿನ ಕಾಲಘಟ್ಟದ ಇತಿಮಿತಿಗಳಲ್ಲಿ ನಡೆದ ಘಟನೆಗಳು ಭವಿಷ್ಯತ್ತಿನ ಚರಿತ್ರಾಕಾರದ ಪುಟಗಳಲ್ಲಿ ರೋಚವೆನಿಸಿಕೊಂಡೂ ಮೂಡಿಬರಬಹುದು.
1924 ರಲ್ಲಿ ಪ್ರಕಟಗೊಂಡ “ಪಟ್ಟೋಳೆ ಪಳಮೆ” ನಂತರದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾದವರೆಲ್ಲರ ಅದರಲ್ಲೂ ಕೊಡಗಿನ ಹೆಣ್ಣುಮಕ್ಕಳ ಬಗ್ಗೆ ಅವರುಗಳ ಕಿರುಪರಿಚಯದ ಸಂಗ್ರಹ ಲೇಖನ ಗ್ರಂಥ ಒಂದರ ಕೊರತೆ ಇಂದಿಗೂ ನಮ್ಮನ್ನು ಕಾಡುತ್ತಿದೆ.
ಕೊಡಗಿನ ಗಾಂಧೀ ಎಂದೇ ಪ್ರಖ್ಯಾತಿ ಹೊಂದಿದ ದಿ. ಪಂದ್ಯಂಡ ಬೆಳ್ಯಪ್ಪ ಮತ್ತು ಶ್ರೀಮತಿ ಸೀತಾ ಬೆಳ್ಯಪ್ಪ ಇವರುಗಳ ಬಗ್ಗೆ ಪತ್ರಿಕೆಗಳಲ್ಲಿ ಬರೆದ ಸಂದರ್ಭೋಚಿತ ಲೇಖನದ ಪ್ರಭಾವಿಕೆಗೊಳಗಾಗಿ ಸದರಿ ಸ್ವಾತಂತ್ರ್ಯ ಹೋರಾಟಗಾರ ದಂಪತಿಗಳ ಬಗ್ಗೆ ಅಧ್ಯಯನ ಗ್ರಂಥ ಒಂದು ಹೊರ ಬಂದಿತ್ತು. ಹಾಗೆಯೇ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರ ಪುರುಷರ ಬೆರಳೆಣಿಕೆ ಕಿರುಪುಸ್ತಕ ಮತ್ತು ಲೇಖನಗಳು ಕೊಡಗು ಸಾಹಿತ್ಯ ಲೋಕದಲ್ಲಿ ಮಿಂಚು ಹರಿಸಿದೆ.
ಕೇವಲ ಮೂರು ದಶಕಗಳಿಂದೀಚೆ ಕರ್ನಾಟಕ ಸರಕಾರ ಕೊಡಗಿನ ಸಾಧಕರ ಬಗ್ಗೆ ಅದರದ್ದೇ ಆದ ರೀತಿಯ ಮೌಲ್ಯಮಾಪನ ಮಾಡಿಕೊಂಡು ಜನಪದ, ಕ್ರೀಡೆ, ಸಾಮಾಜಿಕ ಹಾಗೂ ಕೆಲವೇ ಕೆಲವು ಇನ್ನಿತರ ಕ್ಷೇತ್ರಗಳಲ್ಲಿ ದುಡಿದವರ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಾಣವನ್ನು ಮಾಡಿಕೊಂಡು ಬಂದಿದೆಯಾದರೂ ಅದರದ್ದೇ ಆದ ಇತಿಮಿತಿಯೊಳಗೆ ಪೂರ್ಣ ಚಿತ್ರಣ ಅಲಭ್ಯ ಎಂಬುದಂತೂ ನಿಜ.
ಕೊಡಗಿನಲ್ಲಿ ಭಾಷಾ ಅಕಾಡೆಮಿಗಳು ಸ್ಥಾಪನೆಗೊಂಡ ನಂತರವೂ ದಾಖಲ ಸಾಹಿತ್ಯದೆಡೆಗೆ ಅವುಗಳು ಅಂತಹ ಗಂಭೀರ ಚಿಂತನೆ ನಡೆಸಿದ ಉದಾಹರಣೆಗಳೂ ಉಲ್ಕಾಪಾತಗಳಿದ್ದಂತೆ. ಇತ್ತೀಚೆಗೆ “ಕೊಡವ ಮಕ್ಕಡ ಕೂಟ” ತನ್ನ ಇತಿಮಿತಿಯೊಳಗೆ ದಾಖಲಾ ಸಾಹಿತ್ಯವನ್ನು ಪ್ರಕಟಿಸುವ ಮೂಲಕ ಘೋರಿಯಲ್ಲಿ ಅಡಗಿ ಹೋಗಿದ್ದ ಸಾಧಕರನ್ನು ಬೆಳಕಿನಲ್ಲಿ ಇಡುವ ಪ್ರಯತ್ನ ಮಾಡುತ್ತಿದೆ.
ಕೊಡಗಿನ ಸಾಹಿತಿಗಳ ಬಗ್ಗೆ ‘ಕೈ ಪಿಡಿ’ಯನ್ನು ಕನ್ನಡ ಬಳಗ ಸಂಘಟನೆ ದಶಕಗಳ ಹಿಂದೊಮ್ಮೆ ಪ್ರಕಟಿಸಿದ ನೆನಪು. ಇದೀಗ ಜನಪದ ಪರಿಷತ್ ‘ಜನಪದರ’ ವಿಸ್ತ್ರತ ದಾಖಲಾ ಸಾಹಿತ್ಯವನ್ನು ಹೊರತರುವ ಪ್ರಯತ್ನದಲ್ಲಿದೆ. ಹಾಗೆಯೇ ‘ಚಕೋರ’ ನಾಮಾಂಕಿತ ಸಾಹಿತಿಗಳ ಬಳಗ ಕೊಡಗಿನ ಲೇಖಕರ ಸಾಹಿತಿಗಳ ಮಾಹಿತಿಗಳ ಕಿರುಪರಿಚಯವನ್ನು ಪ್ರಕಟಿಸುವ ಹಂತದಲ್ಲಿದೆ. ಹೀಗೇ ಈ ಎಲ್ಲಾ ಹಿನ್ನಲೆಯ ಅವಶ್ಯಕತೆಗಳ ಇರುವಿಕೆಯಲ್ಲಿ ಕ್ರೀಡಾಪಟುಗಳ ನಾಡಾದ ಕೊಡಗಿನ ಅಂಗಳದಲ್ಲಿ ಮಿಂಚಿ ನಾಡಿಗೂ ದೇಶಕ್ಕೂ ಕೀರ್ತಿ ತಂದವರ ನೆನಪಿನ ಹೊತ್ತಿಗೆಯೊಂದರ ಅವಶ್ಯಕತೆ ಇತ್ತು.
ವಿಘ್ನೇಶ್ ಎಂ ಭೂತನಕಾಡು ಇವರಿಂದ ಸಂಗ್ರಹಿತಗೊಂಡ ಪ್ರಾಯೋಗಿಕ ಕ್ರೀಡಾಕಲಿಗಳ ಗೊಂಚಲು “ಕೊಡವ ಕ್ರೀಡಾಕಲಿಗಳು” ಪುಸ್ತಕವನ್ನು ಕೊಡವ ಮಕ್ಕಡ ಕೂಟ ಪ್ರಕಟಿಸಿ ಕೊಡಗಿನ ಕ್ರೀಡಾಕಲಿಗಳ ದಾಖಲಾ ಸಾಹಿತ್ಯಕ್ಕೆ ಅಡಿಪಾಯ ಹಾಕಿಕೊಟ್ಟಿದೆ. 160 ಪುಟಗಳ ಮಾಹಿತಿ ಸಾಹಿತ್ಯದಲ್ಲಿ ವರದಿಗಳಾಧಾರಿತ ಕ್ರೀಡಾಕಲಿಗಳ ಸಾಧನೆಗಳ ಮಾಹಿತಿ ಲಭ್ಯವಿದೆ. ಹಾಕಿ, ಕ್ರಿಕೆಟ್, ರಗ್ಬಿ, ಥ್ರೋಬಾಲ್, ದೇಹದಾಢ್ಯ, ಮೋಟಾರ್ ರೇಸಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ 62-65 ಸಾಧಕರ ಸಾಧನೆಯ ಕಿರು ಪರಿಚಯ “ಕೊಡವ ಕ್ರೀಡಾ ಕಲಿಗಳು” ಪುಸ್ತಕದ ಹಾಳೆಗಳನ್ನು ಮಗಚುತ್ತಿದ್ದಂತೆ ಸಾಧಕರ ಆ ದಿನಗಳ ಸಮಕಾಲೀನರಂತೂ ತಮ್ಮದೇ ಗುಂಗಿನಲ್ಲಿ ತೇಲುವುದಂತೂ ಸತ್ಯ.
ಈ ಒಂದು ಪವಾಡ ಸೃಷ್ಟಿ ಸಾಧ್ಯ ಮಾಡಿದ್ದು ತಮಿಳು ಮಾತ್ರ ಭಾಷಿಕ ದಂಪತಿಗಳಾದ ಶ್ರೀ ಮಹೇಶ್ ಶ್ರೀಮತಿ ಮಲ್ಲರ್ ದಂಪತಿಗಳ ಪುತ್ರ ವಿಘ್ನೇಶ್ ಭೂತನಕಾಡು. ಕೇವಲ ದಶಕಗಳ ಹಿಂದೆ ಮಡಿಕೇರಿ ಎಫ್‍ಎಂಕೆಎಂಸಿ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾಭ್ಯಾಸ ಮುಗಿಸಿ ರಿಯಲ್ ಪತ್ರಿಕೋದ್ಯಮಕ್ಕೆ ಕಾಲಿಟ್ಟ ದಿನಗಳಿಂದ ಪತ್ರಕೋದ್ಯಮದಲ್ಲೇ ಏನಾದರೊಂದು ಸಾಧಿಸಲೇ ಬೇಕೆಂದು ಸಂಕಲ್ಪ ಮಾಡಿಕೊಂಡಿದ್ದ.
ಸುದ್ದಿ ಛಾಯಾಗ್ರಾಹಕನಾಗಿ ಅನುಭವದ ಬತ್ತಳಿಕೆಗಳನ್ನು ತುಂಬಿಸಿಕೊಂಡ ಫಲಿತಾಂಶವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನಡೆಸುವ ಪೈಪೋಟಿಯಲ್ಲಿ ಅತ್ಯುತ್ತಮ ಸುದ್ದಿಚಿತ್ರ ಪ್ರಶಸ್ತಿ ಸೇರಿದಂತೆ ಕೆಲವು ಪ್ರಶಸ್ತಿಗಳ ಒಡೆಯನಾಗಿದ್ದಾನೆ.
ಪತ್ರಿಕೋದ್ಯಮ ಪದವಿಯನ್ನು ಹೆಗಲಿಗೇರಿಸಿಕೊಂಡು ಹೊರಬಿದ್ದ ಈತ ಕೆಲವಾರು ಪತ್ರಿಕೆಗಳಲ್ಲಿ ಅನುಭವದ ಬುತ್ತಿಗಳನ್ನು ಕಟ್ಟಿಕೊಳ್ಳುತ್ತಾ ಇದೀಗ ಕಳೆದ ಮೂರು ವರುಷಗಳಿಂದ ಕನ್ನಡಪ್ರಭ ಪತ್ರಿಕೆಯಲ್ಲಿ ಸ್ಥಿರವಾದಂತೆ ಕಂಡುಬರುತ್ತಿದ್ದಾನೆ. ಈ ಪಯಣದಲ್ಲಿ ಅಚನಕ್ಕಾಗಿ ಅವಕಾಶ ಲಭಿಸಿದ್ದ ಕ್ರೀಡಾವರದಿಯ ಜವಾಬ್ದಾರಿ. ಕ್ರೀಡೋತ್ಸವ ಸಂದರ್ಭಗಳನ್ನೆಲ್ಲಾ ದೈನಂದಿನ ಹಬ್ಬದ ದಿನಗಳನ್ನಾಗಿ ಪರಿವರ್ತಿಸಿಕೊಳ್ಳತೊಡಗಿದ. ಹಾಗಾಗಿ ಇದೀಗ ಈತನ ಬಳಿ ಕೊಡಗಿನ ನೂರಕ್ಕೂ ಹೆಚ್ಚು ಕ್ರೀಡಾಕಲಿಗಳ ಕಿರುಮಾಹಿತಿಗಳ ಸಂಗ್ರಹವಿದೆ.
ಈತನ ಕ್ರೀಡಾವರದಿಗಳ ಸಂಗ್ರಹಿಕೆಯನ್ನು ಗಮನಿಸಿದ “ಕೊಡವ ಮಕ್ಕಡ ಕೂಟ”ದ ಅಧ್ಯಕ್ಷ
ಶ್ರೀ ಬೊಳ್ಳಾಜಿರ ಅಯ್ಯಪ್ಪ ‘ಕೊಡವ ಕ್ರೀಡಾಕಲಿಗಳ’ ಮಾಹಿತಿ ಕೊಡು ಎಂಬುದಾಗಿ ಬೇತಾಳನಂತೆ ಭೂತನಕಾಡುವಿನ ಬೆನ್ನುಬಿದ್ದ ಪರಿಣಾಮವೇ “ಕೊಡವ ಕ್ರೀಡಾಕಲಿಗಳು”, ಕೊಡವ ಕ್ರೀಡಾಕಲಿಗಳ ಕಿರುಪರಿಚಯದ ಹೊತ್ತಿಗೆ. ಕೊಡವರು ಮಾತ್ರವಲ್ಲದೇ ಎಲ್ಲಾ ಕ್ರೀಡಾಸ್ತರು ಪುಸ್ತಕದ ಹುಡುಕುವಿಕೆಯಲ್ಲಿ ತೊಡಗಿದ್ದಾರೆ. ಇದರ ಯಶಸ್ಸು ಕೂಟದ ಅಯ್ಯಪ್ಪ ಹಾಗೂ ಸಂಗ್ರಹಗಾರ ಭೂತನಕಾಡುವಿಗೆ ಸಲ್ಲಲೇಬೇಕಾಗುತ್ತದೆ.
ಕ್ರೀಡಾಲೋಕದ ನಕ್ಷತ್ರಗಳ ಮತ್ತಷ್ಟು ವಿವರಗಳ ದಾಖಲಕೃತಿಗೆ ಇದು ಮುನ್ನಡಿ ಬರೆದಿದೆ. ಸಮಯದ ಅವಕಾಶ, ಆರ್ಥಿಕ ಸ್ಥಿತಿಗತಿಗಳಿಗೆ ಹೊಂದಿಕೊಂಡು ಶಕ್ತಿಮೀರಿ ಬೆಳಕು ಕಂಡ ಈ ಕ್ರೀಡಾಕೃತಿಯನ್ನು ಇನ್ನೂ ಉನ್ನತೀಕರಿಸುವ ಜವಾಬ್ದಾರಿ ಕ್ರೀಡಾಪ್ರಾಧಿಕಾರ, ಭಾಷಾ ಅಕಾಡೆಮಿಗಳಂತವರು ಹೊತ್ತುಕೊಂಡರೆ ಅಯ್ಯಪ್ಪ ಹಾಗೂ ವಿಘ್ನೇಶ್ ಶ್ರಮ ಸಾರ್ಥಕವಾದಂತೆ.