ಹುಲಿಯ ಹೆಜ್ಜೆ ಗುರುತಿನ ಜಾಡು ಹಿಡಿದು….

Reading Time: 6 minutes

ಹುಲಿಯ ಹೆಜ್ಜೆ ಗುರುತಿನ ಜಾಡು ಹಿಡಿದು….

ಜಗತ್ತಿನಲ್ಲಿ ನಿಮ್ಮ ಮೆಚ್ಚಿನ ಕಾಡು ಪ್ರಾಣಿ ಅಥವಾ ಕ್ರೂರ ಪ್ರಾಣಿ ಯಾವುದು ಎಂಬ ಪ್ರಶ್ನೆಗೆ ಹುಲಿಗೇ ಅತಿ ಹೆಚ್ಚು ಮತಗಳು ಬಿದ್ದಿವೆ. ವಿಚಿತ್ರವೆಂದರೆ ಹುಲಿಯ ಬಗ್ಗೆ ಇಷ್ಟು ಕಾಳಜಿ ವಹಿಸುವವರಿಗೆ ಹುಲಿಯ ಬಗ್ಗೆ ತಿಳಿದಿರುವುದು ತುಂಬಾ ಕಡಿಮೆ. ಪ್ರಾಕ್ತನಶಾಸ್ತ್ರಜ್ಞರಿಗೆ ಹುಲಿಯ ಪಳೆಯುಳಿಕೆಗಳು ಸಿಕ್ಕಿದ್ದು ಇದರ ಆಯಸ್ಸು ಸುಮಾರು ಇಪ್ಪತ್ತು ಲಕ್ಷ ವರ್ಷ ಹಿಂದಿನದ್ದು ಎಂದು ಕಂಡುಬಂದಿದೆ. ಅಂದರೆ ಹುಲಿಗಳು ಬಹಳ ಹಿಂದಿನಿಂದಲೂ ಭೂಮಿಯ ಮೇಲೆ ಉಳಿದುಕೊಂಡು ಬಂದಿವೆ ಎಂದಾಯ್ತು.
ಭಾರತದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಅದು 2,967ಗೆ ಹೆಚ್ಚಾಗಿರುವುದು ಎಲ್ಲರಿಗೂ ಅಚ್ಚರಿ ತಂದಿತ್ತು. ಕಾಡಿನ ಸಮತೋಲನ, ಉತ್ತಮ ಮಳೆಯಾಗಲು ಹುಲಿಗಳು ಸಹ ಕಾರಣವಾಗಿದ್ದು, ಇದು ಭಾರತೀಯರೆಲ್ಲರಿಗೂ ಸಂತಸದ ಸುದ್ದಿಯಾಗಿತ್ತು. ಅಲ್ಲದೆ, ಹುಲಿಗಣತಿಯು ವಿಶ್ವದ ಬೃಹತ್ ಜೀವವೈವಿಧ್ಯ ಗಣತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಹುಲಿ ಆಹಾರ ಸರಪಳಿಯ ತುತ್ತ ತುದಿಯಲ್ಲಿರುವ ಜೀವಿ, ಒಂದು ಹುಲಿ ಕಾಡಲ್ಲಿ ಇದೆ ಎಂದರೆ ಆ ಕಾಡು ಸಂಮೃದ್ಧ ಎಂದು ಅರ್ಥ, ಸಸ್ಯಹಾರಿ ಪ್ರಾಣಿಗಳನ್ನು ನಿಯಂತ್ರಿಸಿ ಇಡೀ ಕಾಡನ್ನು ಸಮತೋಲನದಲ್ಲಿ ಇಡಬಲ್ಲದು.
ಹುಲಿ ಸಂರಕ್ಷಣೆಯ ವಿಚಾರದಲ್ಲಿ ಕಳೆದ ಕೆಲವು ವರ್ಷಗಳಿಂದ ಜಗತ್ತಿನಾದ್ಯಂತ ತೀವ್ರ ಜಾಗೃತಿ ವಹಿಸಲಾಗುತ್ತಿದೆ. ಆದರೂ, ಈ ವಿಷಯದಲ್ಲಿ ಸಕಾರಾತ್ಮಕವೆನ್ನುವಂಥ ಸುದ್ದಿಗಳೇನೂ ಹೆಚ್ಚು ಹೊರಹೊಮ್ಮುತ್ತಲೇ ಇರಲಿಲ್ಲ. ಆದರೆ ಈಗ ಹುಲಿಗಳ ಸಂಖ್ಯೆಯ ಮೇಲೆ ಹೊರಬಿದ್ದಿರುವ ಅಂಕಿ-ಅಂಶಗಳು, ಇದೆಲ್ಲ ಇಷ್ಟು ವರ್ಷಗಳ ಪ್ರಯತ್ನಗಳ ಒಟ್ಟು ಸಕಾರಾತ್ಮಕ ಫ‌ಲ ಎಂಬ ಸಂದೇಶವನ್ನು ಕಳುಹಿಸಿವೆ.
ಭಾರತದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಶೇ. 33.2 8ರಷ್ಟು ಏರಿಕೆಯನ್ನು ಕಂಡಿದೆ ಎಂಬುದು 28 ಜುಲೈ 2019ರಂದು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆಗೊಳಿಸಿದ ಅಖಿಲ ಭಾರತ 2018ರ ಹುಲಿ ಗಣತಿ ವರದಿಯಿಂದ ತಿಳಿದು ಬಂದಿದೆ. ‘ಹುಲಿಗಳ ಸಂಖ್ಯೆ ಎರಡು ಪಟ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕ್ಕಾಗಿ ಒಂಬತ್ತು ವರ್ಷಗಳ ಹಿಂದೆ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಿರ್ಧರಿಸಲಾಗಿತ್ತು. ಇದಕ್ಕಾಗಿ 2022ರ ಗಡಿ ಹಾಕಿಕೊಳ್ಳಲಾಗಿತ್ತು. ಆದರೆ, ನಾವು ಭಾರತದಲ್ಲಿ ನಾಲ್ಕು ವರ್ಷ ಮುಂಚಿತವಾಗಿಯೇ ಆ ಗುರಿಯನ್ನು ತಲುಪಿದ್ದೇವೆ’ ಎಂದು ಆ ಸಂದರ್ಭದಲ್ಲಿ ಪ್ರಧಾನಿ ಹೇಳಿದ್ದರು.
ಈ ಹಿಂದಿನ ಗಣತಿಗಳಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕರ್ನಾಟಕ 524 ಹುಲಿಗಳನ್ನು ಹೊಂದುವ ಮೂಲಕ ಈ ಬಾರಿ ಎರಡನೇ ಸ್ಥಾನಕ್ಕಿಳಿದಿದೆ. 526 ಹುಲಿಗಳಿರುವ ಮಧ್ಯಪ್ರದೇಶ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ ಹಾಗೂ 442 ಹುಲಿಗಳಿರುವ ಉತ್ತರಾಖಂಡ ಮೂರನೇ ಸ್ಥಾನ ಪಡೆದಿದೆ. ನಾಲ್ಕು ವರ್ಷಗಳಲ್ಲಿ 741 ಹುಲಿಗಳು ಹೆಚ್ಚಾಗಿದ್ದು, ಜಗತ್ತಿನಲ್ಲಿ ಹುಲಿ ಸಂತತಿಗೆ ಅತ್ಯಂತ ಸುರಕ್ಷಿತ ಸ್ಥಳವಾಗಿ ಭಾರತ ಹೊರಹೊಮ್ಮಿದೆ.
28 ಜುಲೈ 2019ರಂದು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆಗೊಳಿಸಿದ ಅಂದಾಜು ನಾಲ್ಕನೇ ಸುತ್ತಿನ ಫಲಿತಾಂಶಗಳ ವರದಿಯ ಪ್ರಕಾರ ಹುಲಿಗಳ ಜನಸಂಖ್ಯೆಯಲ್ಲಿ ಶೇ. 33.28 ರಷ್ಟು ಹೆಚ್ಚಳವಾಗಿದೆ ಎಂಬುದನ್ನು ತೋರಿಸಿದೆ. 2014 ರಲ್ಲಿ 2,226 ಇದ್ದ ಹುಲಿಗಳ ಸಂಖ್ಯೆ, 2018 ರಲ್ಲಿ 2,967 ಕ್ಕೆ ಏರಿಕೆಯಾಗಿದೆ.
ಅಳಿಯುತ್ತಿರುವ ಹುಲಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ 2010ರಲ್ಲಿ ರಷ್ಯಾದ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ಜು.29ರಂದು ಸಮ್ಮೇಳನ ಆಯೋಜಿಸಲಾಗಿತ್ತು. ಹುಲಿಗಳ ಜನಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು 2022ಕ್ಕೆ ನಿರ್ಧರಿಸಲಾಯಿತು. ಭಾರತದಲ್ಲಿ ನಾವು ಈ ಗುರಿಯನ್ನು ನಾಲ್ಕು ವರ್ಷಗಳ ಮುಂಚೆಯೇ ಪೂರ್ಣಗೊಳಿಸಿದ್ದೇವೆ ಎಂದು ತಮ್ಮ ಅಧಿಕೃತ ನಿವಾಸದಲ್ಲಿ ವರದಿಯನ್ನು ಬಿಡುಗಡೆ ಮಾಡಿ ಮೋದಿ ಹೇಳಿದ್ದರು. 2010ರ ಜು.29ರಂದೇ ಸಮ್ಮೇಳನ ನಡೆಸಿದ್ದರಿಂದ ಪ್ರತಿ ವರ್ಷ ಇದೇ ದಿನವನ್ನು “ವಿಶ್ವ ಹುಲಿದಿನ” ಎಂದು ತೀರ್ಮಾನಿಸಲಾಯಿತು.
ಹುಲಿಗಣತಿಯಂತಹ ವಿಶ್ವದ ಬೃಹತ್ ಜೀವವೈವಿಧ್ಯ ಗಣತಿ ಕೈಗೊಂಡಿದ್ದರ ಹಿಂದೆ ರೋಚಕ ಕತೆಗಳಿವೆ, ಕೇಂದ್ರ ಸರ್ಕಾರದ ಯೋಜನೆ, ಅರಣ್ಯ ಇಲಾಖೆ ಸಿಬ್ಬಂದಿಯ ಶ್ರಮ ಇದೆ. ಹುಲಿಗಳು ಇರುವ 20 ರಾಜ್ಯಗಳಲ್ಲಿ ಅರಣ್ಯ ಇಲಾಖೆಗಳ ಸುಮಾರು 44 ಸಾವಿರ ಸಿಬ್ಬಂದಿಯು ಗಣತಿಗಾಗಿ ಶ್ರಮವಹಿಸಿದೆ. 2017ರ ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಗಣತಿ ಆರಂಭವಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಹುಲಿಗಣತಿ ಮಾಡಿದೆ ಎಂದು ತಿಳಿದುಬಂದಿದೆ.
ನಾಲ್ಕನೇ ಹುಲಿಗಣತಿಯ ವರದಿಯಿಂದ ದೇಶದಲ್ಲಿ ಸುಮಾರು 3 ಸಾವಿರ ಹುಲಿಗಳು ಇರುವುದಾಗಿ ತಿಳಿದುಬಂದಿದೆ. ಈ ಮೂಲಕ ಜಗತ್ತಿನಲ್ಲಿ ಹುಲಿ ಸಂತತಿಗೆ ಅತ್ಯಂತ ಸುರಕ್ಷಿತ ಸ್ಥಳವಾಗಿ ಭಾರತ ಗುರುತಿಸಿಕೊಂಡಿದೆ. ಹುಲಿಗಳ ಗಣತಿಗಾಗಿ ಈ ಅರಣ್ಯ ಇಲಾಖೆ ಸಿಬ್ಬಂದಿಯು ಇಷ್ಟು ದಿನ ಅರಣ್ಯದಲ್ಲಿ ಸುಮಾರು 3.81 ಲಕ್ಷ ಚದರ ಕಿಲೋಮೀಟರ್ ಸಂಚರಿಸಿದ್ದಾರೆ. ಹುಲಿಗಳು ಅಡಗಿರುವ ಕುರಿತು ಮಾಹಿತಿ, ಅವುಗಳ ಹೆಜ್ಜೆಗುರುತು, ವಾಸಿಸುವ ಸ್ಥಳ, ಹೆಚ್ಚು ಇರುವ ಪ್ರದೇಶಗಳನ್ನು ಗುರುತಿಸಿ ಗಣತಿ ಮಾಡಿದೆ. ಇದಕ್ಕಾಗಿ 5.93 ಲಕ್ಷ ಮಾನವ ದಿನಗಳ ಶ್ರಮವನ್ನು ವ್ಯಯಿಸಲಾಗಿದೆ ಎಂದು ತಿಳಿದುಬಂದಿದೆ.
2006 ರಿಂದ ವೈಜ್ಞಾನಿಕ ರೀತಿಯಲ್ಲಿ ಹುಲಿಗಳ ಎಣಿಕೆ ಕಾರ್ಯ ನಡೆಸಲಾಗುತ್ತಿದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ದೇಶದಲ್ಲಿ ಹುಲಿ ಗಣತಿ ನಡೆಸಲಾಗುತ್ತಿದೆ. 2006 ರಲ್ಲಿ ದೇಶದಲ್ಲಿ 1411 ಹುಲಿಗಳು ಇರುವುದಾಗಿ ಗುರುತಿಸಲಾಗಿತ್ತು. ಪ್ರಸ್ತುತ ವರದಿಯ ಪ್ರಕಾರ, ಆ ಸಂಖ್ಯೆ ಈಗ ದ್ವಿಗುಣಗೊಂಡಿದೆ. 2006, 2010, 2014, 2018 ರಲ್ಲಿ ಗಣತಿ ನಡೆಸಲಾಗಿದೆ. ಹುಲಿ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಪರಿಣಾಮ ಈ ವರದಿಯಿಂದ ತಿಳಿದುಬಂದಿದೆ. ಈ ಬಾರಿ ಗಣತಿಗೆ ಕ್ಯಾಮರಾ ಟ್ರ್ಯಾಪ್ ಗಳನ್ನು ಬಳಸಲಾಗಿತ್ತು. 2014ರಲ್ಲಿ ಇಂತಹ ಕ್ಯಾಮೆರಾಗಳ ಸಂಖ್ಯೆ 9,735 ಇತ್ತು.
ಹುಲಿಗಳ ಮೈಮೇಲಿನ ಪಟ್ಟೆಗಳು ಪ್ರತಿ ಹುಲಿಗೂ ಭಿನ್ನವಾಗಿದ್ದು, ಇದರಿಂದ ಹುಲಿಗಳನ್ನು ನಿರ್ದಿಷ್ಟವಾಗಿ ಗುರುತಿಸಬಹುದು. ಹುಲಿಯ ಹೆಜ್ಜೆ ಗುರುತಿನ ಜಾಡು ಹಿಡಿದು ಅವುಗಳ ಆವಾಸ ಸ್ಥಾನದ ವ್ಯಾಪ್ತಿ ಪತ್ತೆ ಮಾಡಲಾಯಿತು. ಹೆಜ್ಜೆಯ ಉದ್ದ-ಅಗಲವನ್ನು ಅಳತೆ ಮಾಡಲಾಯಿತು. ಈ ಸಂದರ್ಭದಲ್ಲಿ ಹುಲಿ ಗಣತಿಯೊಂದಿಗೆ ಕಾಡಿನ ಇತರೆ ಪ್ರಾಣಿಗಳಾದ ಆನೆ, ಚಿರತೆ, ಕಾಡಮ್ಮೆ, ಜಿಂಕೆ ಮುಂತಾದ ಪ್ರಾಣಿಗಳು ಗಣತಿದಾರರಿಗೆ ದರ್ಶನ ಕೊಟ್ಟವು.
ಹುಲಿ ಅಪ್ರತಿಮ ಬೇಟೆಗಾರನಲ್ಲ, ಅನೇಕ ಬಾರಿ ಪ್ರಯತ್ನಿಸಿ ಕೆಲವು ಸಲ ಮಾತ್ರ ಗೆಲ್ಲುತ್ತದೆ. ಹುಲಿಯ ಆಹಾರ ಸರಪಳಿಯಲ್ಲಿ ಮನುಷ್ಯ ಇಲ್ಲ, ಆದರೆ ಗಾಯಗೊಂಡ ಹುಲಿಗಳು, ವಯಸ್ಸಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಅಸಮರ್ಥವಾದಾಗ ಸುಲಭದಲ್ಲಿ ಸಿಗುವ ಮನುಷ್ಯ, ಜಾನುವಾರುಗಳ ಮೇಲೆ ದಾಳಿ ಮಾಡುತ್ತವೆ.
ಅಭಿವೃದ್ಧಿಯ ಹೆಸರಿನಲ್ಲಿ ಮತ್ತು ಹೆಚ್ಚಿದ ಜನಸಂಖ್ಯೆ ಮತ್ತವರ ಅವಶ್ಯಕತೆಗಳಿಗಾಗಿ ಹುಲಿಯ ಆವಸವಾದ ಕಾಡುಗಳ ನಾಶ, ವಿವಿಧ ಕಾರಣಗಳಿಗಾಗಿ ಹುಲಿಯ ಮತ್ತು ಹುಲಿಯ ಬಲಿ, ಪ್ರಾಣಿಗಳ ಕಳ್ಳ ಬೇಟೆ, ಕಾಡ್ಗಿಚ್ಚು, ಹೀಗೆ ಅನೇಕ ಕಾರಣಗಳಿಂದ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂಬುದಂತೂ ನಿಜ.

✍. ವಿವೇಕ್‌ ನರೇನ್

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments