ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ; ಭತ್ತ ಸಸಿಮಡಿ ಕಾರ್ಯಕ್ಕೆ ಸಿದ್ಧತೆ

ಜಿಲ್ಲೆಯಲ್ಲಿ ಮುಂಗಾರು ಸಕಾಲದಲ್ಲಿ ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆ ಗರಿಗೆದರಿದೆ. ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಭತ್ತ ಸಸಿಮಡಿ ಮಾಡುವ ಕಾರ್ಯಕ್ಕೆ ಸಿದ್ಧತೆಗಳು ನಡೆದಿವೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಹಾಗೂ ಮುಸುಕಿನ ಜೋಳದ ಬೆಳೆಗಳು ಪ್ರಮುಖವಾಗಿದ್ದು, ಈಗಾಗಲೇ ಮುಸುಕಿನ ಜೋಳ ಬಿತ್ತನೆ ಕಾರ್ಯ ಆರಂಭವಾಗಿದೆ. ಸೋಮವಾರಪೇಟೆ ತಾಲ್ಲೂಕಿನ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬಿತ್ತನೆ ಮಾಡುವ ಗುರಿ ಇದ್ದು, ಇದರಲ್ಲಿ ಈಗಾಗಲೇ ಶೇ.10 ರಷ್ಟು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಉಳಿದಂತೆ ಬಿತ್ತನೆ ಕಾರ್ಯ ಮುಂದುವರೆದಿದೆ. ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಸಹಾಯಧನದಡಿ ವಿತರಣೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಈ ಬಾರಿ 30,400 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಕೃಷಿ ಮಾಡುವ ಗುರಿ ಇದ್ದು, ಸಕಾಲದಲ್ಲಿ ಮಳೆಯಾಗುತ್ತಿರುವುದರಿಂದ ಭತ್ತ ಸಸಿಮಡಿ ತಯಾರಿಗೆ ಸಿದ್ಧತೆಗಳು ನಡೆಯುತ್ತಿವೆ. ಭತ್ತದ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲ್ಲಿ ದಾಸ್ತಾನು ಸಹಾಯಧನದಡಿ ವಿತರಣೆ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ 2,600 ಕ್ವಿಂಟಾಲ್ ಭತ್ತ ಮತ್ತು ಮುಸುಕಿನ ಬಿತ್ತನೆ ಬೀಜ ಅಗತ್ಯವಿದ್ದು, ಈಗಾಗಲೇ 950 ಕ್ವಿಂಟಾಲ್ ಭಿತ್ತನೆ ಬೀಜ ವಿತರಿಸಲಾಗಿದೆ. ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕೆ.ರಾಜು ಅವರು ಮಾಹಿತಿ ನೀಡಿದ್ದಾರೆ.
ಕೃಷಿಕರು ಭತ್ತ ಸಸಿಮಡಿ ಮಾಡುವ ಸಂದರ್ಭದಲ್ಲಿ ಬಿತ್ತನೆಗೆ ಮೊದಲು ಬಿತ್ತನೆ ಬೀಜಗಳನ್ನು ಬೀಜೋಪಚಾರ ಮಾಡಿ ಉಪಯೋಗಿಸುವುದು ಸೂಕ್ತವಾಗಿದೆ. ಪ್ರತಿ ಕೆ.ಜಿ.ಭತ್ತ ಬಿತ್ತನೆ ಬೀಜಕ್ಕೆ 4 ಗ್ರಾಂ. ಬೇವಿಸ್ಟಿನ್(ಕಾರ್ಬನ್‍ಡೈಜಿಂ) ಶಿಲೀಂದ್ರನಾಶಕ ಪುಡಿಯನ್ನು ಬೆರೆಸಿ ಬೀಜೋಪಚಾರ ಮಾಡುವುದು ಸೂಕ್ತವಾಗಿದೆ. ರೈತರು ಬಿತ್ತನೆ ಬೀಜವನ್ನು ನೀರಿನಲ್ಲಿ ನೆನೆಸಿ ತೆಗೆದ ನಂತರ ಮೊಳಕೆಗೆ ಇಡುವ ಮೊದಲು ಬೀಜೋಪಚಾರ ಮಾಡುವುದು ಒಳಿತಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಭತ್ತದ ಬೆಳೆಗೆ ಬೆಂಕಿ ರೋಗದ ಬಾಧೆ ಹೆಚ್ಚಾಗಿ ಕಂಡುಬರುವ ಸಾಧ್ಯತೆ ಇರುವುದರಿಂದ ರೈತರು ಮುಂಜಾಗ್ರತಾ ಕ್ರಮವಾಗಿ ಬಿತ್ತನೆಗೆ ಮೊದಲು ಕಾರ್ಬನ್‍ಡೈಜಿಂ ಶಿಲೀಂಧ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದು ಸೂಕ್ತವಾಗಿದೆ.
ರೈತರು ಬಿತ್ತನೆ ಬೀಜವನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಹೊರ ತೆಗೆದ ನಂತರ ನೀರನ್ನು ಬಸಿದು ಪ್ರತಿ ಒಂದು ಕೆ.ಜಿ.ಬಿತ್ತನೆ ಬೀಜಕ್ಕೆ 4 ಗ್ರಾಂ.ನಂತೆ ಕಾರ್ಬನ್‍ಡೈಜಿಂ ಶಿಲೀಂಧ್ರ ನಾಶಕವನ್ನು ಚೆನ್ನಾಗಿ ಮಿಶ್ರಣಮಾಡಿ ನೆರಳಿನಲ್ಲಿ ಒಣಗಿಸಿ ನಂತರ ಮೊಳಕೆಗೆ ಇಟ್ಟು, ಮೊಳಕೆ ಬಂದ ನಂತರ ಸಸಿ ಮಡಿಯಲ್ಲಿ ಬಿತ್ತನೆ ಮಾಡುವುದು. ಹೀಗೆ ಮಾಡುವುದರಿಂದ ಬೀಜದಿಂದ ಬರುವ ಬೆಂಕಿ ರೋಗವನ್ನು ತಡೆಗಟ್ಟಬಹುದಾಗಿದೆ.
ದೀರ್ಘಾವಧಿ ತಳಿಗಳಾದ ಇಂಟಾನ್, ತುಂಗಾ, ಅತಿರ, ಬಿ.ಆರ್.2655 ತಳಿ ಭತ್ತಗಳನ್ನು ಜೂನ್ 10 ರಿಂದ 20 ರೊಳಗೆ ಬಿತ್ತನೆ ಮಾಡಬಹುದಾಗಿದೆ. ಮಧ್ಯಮಾವಧಿ ತಳಿಗಳಾದ ಐ.ಇ.ಟಿ.7191, ಜಯ, ಎಂ.ಟಿ.ಯು 1001 ತಳಿಗಳನ್ನು ಜೂನ್ ಮೂರನೇ ಅಥವಾ 4ನೇ ವಾರದಲ್ಲಿ ಬಿತ್ತನೆ ಮಾಡುವುದು. ಅಲ್ಪಾವಧಿ ತಳಿಗಳಾದ ಐ.ಆರ್.64, ಹೈಬ್ರೀಡ್ ಭತ್ತಗಳನ್ನು ಜುಲೈ ಮೊದಲನೇ ವಾರದ ನಂತರ ಬಿತ್ತನೆಗೆ ಬಳಸುವುದು ಸೂಕ್ತವಾಗಿದೆ.
ರಸಗೊಬ್ಬರ ದಾಸ್ತಾನು:-ಜಿಲ್ಲೆಯ ಸಹಕಾರ ಸಂಘ ಹಾಗೂ ಖಾಸಗಿ ಅಂಗಡಿಗಳಲ್ಲಿ ಯೂರಿಯಾ, ಡಿ.ಎ.ಪಿ, ಎಂ.ಒ.ಪಿ, ಹಾಗೂ 17:17:17, 15:15:15, 10;26:26. ಹೀಗೆ ವಿವಿಧ ಕಾಂಪ್ಲೆಕ್ಸ್ ಗೊಬ್ಬರ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೆಶಕರಾದ ರಾಜು ಅವರು ಮಾಹಿತಿ ನೀಡಿದ್ದಾರೆ.