ಭಾರತೀಯರ ರಾಷ್ಟ್ರೀಯ ಹಬ್ಬ; ಗಣರಾಜ್ಯೋತ್ಸವ

ಭಾರತೀಯರ ರಾಷ್ಟ್ರೀಯ ಹಬ್ಬ; ಗಣರಾಜ್ಯೋತ್ಸವ

ಪ್ರತಿವರ್ಷ ಜನವರಿ ೨೬ರಂದು ಭಾರತೀಯ ಗಣರಾಜ್ಯೋತ್ಸವನ್ನು ದೇಶದಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವಂವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ ಸರ್ಕಾರಿ ರಜಾ ದಿನ
ಗಣರಾಜ್ಯೋತ್ಸವದ ಮಹತ್ವ ಎಷ್ಟೋ ಜನರಿಗೆ ಗೊತ್ತಿಲ್ಲ. ಈ ದಿನವನ್ನು ನಾವು ಹಬ್ಬದಂತೆ ಆಚರಿಸಬೇಕು. ಕಾನೂನುಗಳನ್ನು ಪರಿಪಾಲನೆ ಮಾಡಲು ಕಂಕಣ ತೊಡಬೇಕು. ಡಾ.ಬಿ.ಆರ್‌.ಅಂಬೇಡ್ಕರ್ ಅವರನ್ನು ಮನಸಾರೆ ನೆನೆಯಬೇಕು. ಗಣರಾಜ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನಗಳನ್ನು ಇಂದಿನ ಯುವಕ, ಯುವತಿಯರು ಅರ್ಥ ಮಾಡಿಕೊಂಡು ದೇಶಕ್ಕಾಗಿ ಸಮಯ ತೆಗೆದುಕೊಂಡು ಓದಿ, ತಿಳಿದುಕೊಳ್ಳಬೇಕು.
ಭಾರತೀಯ ಪ್ರಜೆಗಳಿಗೆ ತಮ್ಮನ್ನು ತಾವೇ ಆಳಿಕೊಳ್ಳುವ ಅವಕಾಶ ದೊರೆತ ಪವಿತ್ರ ದಿನ. ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡ ಹಿಂದೂಸ್ತಾನಕ್ಕೆ, ಸ್ವಾತಂತ್ರ‍್ಯ ಸಿಕ್ಕು ಎರಡೂವರೆ ವರ್ಷಗಳ ಬಳಿಕ ಮಹಾ ಸಂವಿಧಾನವೊಂದು ಅರ್ಪಿತವಾಯ್ತು. ಅಂದು ಭಾರತದ ಪ್ರಜೆಗಳು ಸ್ವತಃ ತಮಗೇ ಪ್ರಭುಗಳಾದರು. ಪ್ರಜೆಗಳೇ ಪ್ರಭುಗಳಾದ ೧೯೫೦ರ ಜನವರಿ ೨೬ರ ದಿನವನ್ನು ಗಣರಾಜ್ಯದಿನ ಎಂದು ಘೋಷಿಸಲಾಯಿತು. ಮೊದಲು ಭಾರತದಲ್ಲಿ ೧೯೩೦ನೇ ಇಸವಿಯಲ್ಲಿ ಜನವರಿ ೨೬ “ಸ್ವಾತಂತ್ರ್ಯ ದಿನ”ವನ್ನು “ಪೂರ್ಣ ಸ್ವರಾಜ್” ದಿನವನ್ನಾಗಿ ಆಚರಿಸಲಾಗುತ್ತಿತ್ತು. ಈ ಪೂರ್ಣ ಸ್ವರಾಜ್ ದಿನದ ನೆನಪಿಸುಕೊಳ್ಳುವ ಸಲುವಾಗಿ ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರಂದು ಆಚರಿಸಲಾಗುತ್ತದೆ. (ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತ ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರಂದು)
ಭಾರತದ ಪ್ರಜೆಗಳನ್ನು ಆಳುವ ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ ಹಾಗೂ ಜನರಿಗಾಗಿ ಕೆಲಸಮಾಡುವ ಕಾರ್ಯಾಂಗಗಳು ಹೇಗಿರಬೇಕು, ಯಾವೆಲ್ಲ ನೀತಿ ನಿಯಮ ಕಟ್ಟಳೆಗಳನ್ನು ಅವರು ಪಾಲಿಸಬೇಕು ಎಂಬೆಲ್ಲ ಸೂಚನೆಗಳನ್ನು ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಚವೇ ಭಾರತದ ಸಂವಿಧಾನ. ಆಗಸ್ಟ್ ೧೫, ೧೯೪೭ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಎರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ ೪, ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು. ನವೆಂಬರ್ ೨೬,೧೯೪೯ ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬ ೧೯೫೦ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಡಾ.ಬಿ.ಆರ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಈ ಸಂವಿಧಾನ, ಡಾ.ರಾಜೇಂದ್ರ ಪ್ರಸಾದ್‌ರ ಅಧ್ಯಕ್ಷತೆಯಲ್ಲಿ ೧೯೫೦, ಜನವರಿ ೨೬ರಂದು ಅಂಗೀಕರಿಸಲ್ಪಟ್ಟಿತ್ತು.
ಭಾರತ ದೇಶದಲ್ಲಿ ಸಂವಿಧಾನ ಜಾರಿಯಲ್ಲಿ ಬಂದ ಮೇಲೆ ಪ್ರಜೆಗಳದೇ ಸರ್ಕಾರ ಅಸ್ತಿತ್ವಕ್ಕೆ ಬಂತು. ದೇಶದಲ್ಲಿ ತಮಗೆ ಸ್ವಾತಂತ್ರ‍್ಯವಿದೆ, ತಮ್ಮನ್ನಾಳುವವರನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಎಂಬ ಸಂತಸ ಇಡೀ ದೇಶದ ಜನರಲ್ಲಿ ಪ್ರತಿಫಲಿಸಿತ್ತು. ಜನರಲ್ಲಿ ನಿಧಾನವಾಗಿ ಸಂವಿಧಾನ, ಸರಕಾರದ ಮೇಲೆ ವಿಶ್ವಾಸ ಬೆಳೆಯಲು ಪ್ರಾರಂಭವಾಯಿತು. ಒಕ್ಕೂಟ ವ್ಯವಸ್ಥೆಯಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡು ಬಹುಶೃತ ಸಮಾಜ ಸಂಸ್ಥಾಪನೆಗೆ ನೀರೆರೆಯುವುದೇ ಸಂವಿಧಾನದ ಪ್ರಧಾನ ಆಶಯ. ಇಂತಹ ಸಮಾಜದ ಬಾಳು-ಬದುಕಿಗೆ ಬೇಕಾದ ರೀತಿ ರಿವಾಜುಗಳು, ಪಾರಂಪರಿಕ ವಿಧಿ ವಿಧಾನಗಳು, ನಾಗರಿಕರ ಕಲ್ಯಾಣಕ್ಕಾಗಿ ಕಾನೂನು ಹಾಗೂ ನಿಯಮಾವಳಿಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿ ಪ್ರತಿಯೊಬ್ಬ ಭಾರತೀಯನೂ ಸರಿಸಮಾನ ಎಂಬ ಭಾವ ಬಿತ್ತಿದ ವಿಧಾನಕ್ಕೆ ಇಡೀ ದೇಶದ ಅನುಮೋದನೆ ಸಿಕ್ಕಿತ್ತು. ಹೀಗಾಗಿಯೇ ಭಾರತದ ಸಂವಿಧಾನ ಭಾರತೀಯರೆಲ್ಲರಿಗೆ ಒಂದು ಧರ್ಮಗ್ರಂಥ.
ಗಣರಾಜ್ಯೋತ್ಸವ ದಿನಾಚರಣೆಯನ್ನು ಭಾರತದ ರಾಜಧಾನಿಯಾದ ದೆಹಲಿಯ ರಾಜ್‌ಪಥ್‌ನಲ್ಲಿ, ಭಾರತದ ರಾಷ್ಟ್ರಪತಿಯ ಸಮ್ಮುಖದಲ್ಲಿ ನಡೆಯುತ್ತದೆ. ಜನವರಿ ೨೬ರಂದು ಭಾರತಕ್ಕೆ ಗೌರವವನ್ನು ಸೂಚಿಸುವ ಮೆರವಣಿಗೆ ಅಲ್ಲಿ ನಡೆಯುತ್ತದೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.
ಬಾಬಾ ಸಾಹೇಬ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನವನ್ನು ಅರ್ಪಣೆ ಮಾಡಿದ ದಿನವೇ ಗಣರಾಜ್ಯೋತ್ಸವ. ಬಹಳ ವರ್ಷಗಳ ಕಾಲ ಹಂಬಲಿಸಿದ ಸಮಾನತೆ, ಮಾನವೀಯತೆ, ಸಹೋದರತೆ, ಜಾತ್ಯತೀತ, ಸಮಾಜವಾದಿ ಆಶಯಗಳನ್ನು ಮೂಡಿಸುವ ಸಂವಿಧಾನ ನಮ್ಮದು. ಅದರ ಅನುಷ್ಠಾನದ ದಿನವನ್ನು ನಾವು ಗಣರಾಜ್ಯದ ದಿನವೆಂದು ಸಂಭ್ರಮಿಸುತ್ತೇವೆ.
ನಮ್ಮ ಸಂವಿಧಾನ ಎಂಥದ್ದು. ಅದರಲ್ಲಿ ಏನೇನು ಹೇಳಲಾಗಿದೆ ಎಂಬುದನ್ನು ದೇಶದ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಇದಕ್ಕಾಗಿ ಸಂವಿಧಾನವನ್ನು ಓದಬೇಕು. ಅದನ್ನು ಅರ್ಥೈಸಿಕೊಂಡು, ಅದರ ಆಶಯಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಇಡೀ ದೇಶವನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯಬಹುದು. ಭಾರತವನ್ನು ಬಲಿಷ್ಠ ದೇಶವನ್ನಾಗಿಸಬಹುದು
ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಿಕೊಂಡ ದಿನವನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತಿದ್ದರೆ, ಸಂವಿಧಾನ ಜಾರಿಯಾದ ದಿನವನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶದಲ್ಲಿ ಸಂವಿಧಾನ ಎಷ್ಟರ ಮಟ್ಟಿಗೆ ಜಾರಿಯಾಗಿದೆ, ಸಂವಿಧಾನದ ಆಶಯದ ಅನ್ವಯವೇ ದೇಶದ ಪ್ರಗತಿ ಆಗುತ್ತಿದೆಯಾ? ಇಲ್ಲವಾ? ಎಂಬುದರ ಅವಲೋಕನ ಈ ಸಂದರ್ಭದಲ್ಲಿ ಆಗಬೇಕು. ಸಂವಿಧಾನದ ಆಶಯಗಳು ಜಾರಿಯಾಗಬೇಕು ಎಂದರೆ ಪ್ರಜೆಗಳಿಗೆ ರಾಜಕೀಯ ಶಿಕ್ಷಣ ಅತ್ಯವಶ್ಯಕ. ಅದನ್ನು ಒದಗಿಸುವ ಸಂಕಲ್ಪ ಈ ದಿನದಂದು ಆಗಬೇಕು..
ಸಂವಿಧಾನದ ಆಶಯ ಸಮ ಸಮಾಜದ ನಿರ್ಮಾಣ. ರಾಜಕೀಯ ಸ್ವಾತಂತ್ರ್ಯಕ್ಕಿಂತಲೂ ಭಿನ್ನವಾಗಿ ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವ ಸಂವಿಧಾನದ ಆಶಯ. ಆರ್ಥಿಕವಾಗಿ ಸಂಪನ್ಮೂಲಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಿಲ್ಲ. ತಾರತಮ್ಯಗಳು ಮುಂದುವರಿದಲ್ಲಿ ಪ್ರಜಾಪ್ರಭುತ್ವದ ಆಶಯ ಕುಸಿಯುತ್ತವೆ. ದೇಶದ ಪ್ರಜೆಗಳಿಗೆ ಧರ್ಮಾತೀತ, ಜಾತ್ಯತೀತವಾಗಿ ಅಭಿವೃದ್ಧಿ ಆಶಯಗಳಲ್ಲಿ ಸಕಾರಾತ್ಮವಾಗಿ ಒಳಗೊಳ್ಳುವಲ್ಲಿ ನಾಗರಿಕರು ಶ್ರಮಿಸಿದಲ್ಲಿ ಗಣರಾಜ್ಯೋತ್ಸವದ ಆಶಯ ಈಡೇರುತ್ತದೆ.

ಲೇಖಕರು: ✍. ಅರುಣ್ ಕೂರ್ಗ್

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
0 0 votes
Article Rating
Subscribe
Notify of
guest
0 Comments
Inline Feedbacks
View all comments