ಕಳೆ ಮತ್ತು ಕಳೆ ನಿಯಂತ್ರಣ Horticulture in Coorg Weed and weed control

Reading Time: 12 minutes

ಕಳೆ ಮತ್ತು ಕಳೆ ನಿಯಂತ್ರಣ

ಜಮೀನಿನಲ್ಲಿ ಬಿತ್ತನೆ ಮಾಡದೆ ಬೆಳೆಯುವಂತ ಗಿಡಗಳನ್ನು ಕಳೆ ಎಂದು ಕರೆಯುತ್ತಾರೆ. ಕಳೆಗಳು ಬೆಳೆಯ ಬೆಳವಣಿಗೆ ಮತ್ತು ಇಳುವರಿಯಲ್ಲಿ ನಷ್ಟ ಉಂಟುಮಾಡುತ್ತದೆ.
ಗುಣಗಳು
ಕಳೆಗಳು ಅನೇಕ ವಿಶೇಷ ಗುಣಗಳನ್ನು ಹೊಂದಿದ್ದು ಮತ್ತು ಈ ಗುಣಗಳಿಂದಾಗಿ ಫಸಲಿನಲ್ಲಿ ಹೆಚ್ಚಿನ ನಷ್ಟ ಉಂಟುಮಾಡುತ್ತದೆ. ಈ ಗುಣಗಳು ಕೆಳಗಿನಂತಿವೆ.
1 ಮಧ್ಯಮ ಕಳೆಗಳಲ್ಲಿ ಬೇರುಗಳು ಉದ್ದವಾಗಿದ್ದು ಚೆನ್ನಾಗಿ ಅಭಿವೃದ್ಧಿ ಹೊಂದಿರುತ್ತದೆ. ಕೆಲವೊಂದು ಕಳೆಗಳಿಗೆ ಗೆಡ್ಡೆಗಳಿದ್ದು ನೀರು ಮತ್ತು ಆಹಾರವನ್ನು ಶೇಖರಿಸಿಡುತ್ತದೆ. ಇದರಿಂದ ಕಷ್ಟಕರ ಪರಿಸ್ಥಿತಿಯಲ್ಲಿ ಹೆಚ್ಚು ಸಮಯ ಬದುಕುಳಿಯುತ್ತವೆ.
2 ಹಲವಾರು ಕಳೆಗಳ ಬೀಜಗಳು ಫಸಲಿನ ಬೀಜದಂತೆ ಇರುವುದರಿಂದ ಕಳೆಯ ಬೀಜವನ್ನು ಕಂಡು ಹಿಡಿಯುವುದು ಕಷ್ಟವಾಗುತ್ತದೆ.
3 ಕಳೆಗಳು ಅತೀ ಹೆಚ್ಚು ಬೀಜವನ್ನು ಉತ್ಪಾದಿಸುತ್ತದೆ ಚಿನೋ ಪೋಡಿಯಂ ಎಂಬ ಕಳೆ ಒಂದು ಗಿಡದಲ್ಲಿ ಸುಮಾರು 6 ಲಕ್ಷ ಬೀಜಗಳನ್ನು ಉತ್ಪಾದಿಸುತ್ತದೆ. ಫಲಾರಿಸ್ ಮೈನೊರ್ ಎಂಬ ಕಳೆ ಗಿಡ 10-30 ಸಾವಿರ ಬೀಜಗಳನ್ನು ಉತ್ಪಾದಿಸುತ್ತದೆ.
4 ಕೆಲವು ಕಳೆಯ ಬೀಜಗಳು 30 ರಿಂದ 40 ವರ್ಷ ಹಾಳಾಗದೆ ಇದ್ದು ಮೊಳಕೆಯೊಡೆಯುತ್ತವೆ. ಚಿನೋ ಪೋಡಿಯಂನ ಬೀಜ 25-40 ವರ್ಷಗಳ ನಂತರವೂ ಮೊಳಕೆಯೊಡೆಯುತ್ತದೆ.
5 ಫಸಲಿನ ಬೆಳೆಗೆ ಹೋಲಿಸಿದರೆ ಕಳೆಗಿಡಗಳಿಗೆ ಪ್ರತಿಕೂಲ ಪರಿಸ್ಥಿತಿ, ರೋಗ ಮತ್ತು ಕೀಟ ಬಾಧೆಯನ್ನು ತಾಳಿಕೊಳ್ಳುವ ಶಕ್ತಿ ಜಾಸ್ತಿ ಇದೆ.
6 ಕೆಲವು ಬೀಜಗಳಿಗೆ ಮುಳ್ಳು, ಹಾಲಿನ ದ್ರವ ಮತ್ತು ಹುರಿಗಳಿರುವುದರಿಂದ ಪ್ರಾಣಿಗಳು ಮೇಯುವುದಿಲ್ಲ.
ಕಳೆಯಿಂದಾಗುವ ನಷ್ಟ
ಗಿಡದ ಬೆಳವಣಿಗೆ ಮತ್ತು ಇಳುವರಿಯಲ್ಲಿ ಕಳೆಗಳು ಹೆಚ್ಚಿನ ನಷ್ಟವನ್ನು ಉಂಟು ಮಾಡುತ್ತದೆ ಹಾಗು ಮಣ್ಣಿಗೆ ಮತ್ತು ವಾತಾವರಣಕ್ಕೆ ಕೆಟ್ಟ ಪರಿಣಾಮ ಬೀರುತ್ತವೆ. ಈ ಪರಿಣಾಮಗಳು ಕೆಳಗಿನಂತಿವೆ.
1 ಮಣ್ಣಿನ ತೇವಾಂಶ: ಫಸಲಿಗೆ ಕೊಟ್ಟ ನೀರನ್ನು ಕಳೆಗಳು ಬಳಸಿಕೊಳ್ಳುತ್ತವೆ. ಕೆಲವೊಂದು ಕಳೆ ಗಿಡಗಳ ನೀರಿನ ಅವಶ್ಯಕತೆ ಬೆಳೆಗಿಂತ ಜಾಸ್ತಿ ಇರುತ್ತದೆ.
2 ಪೋಷಕಾಂಶ: ಬೆಳೆಗೆ ಹಾಕಿದ ಪೋಷಕಾಂಶವನ್ನು ಹೀರಿಕೊಳ್ಳುತ್ತದೆ. ಶೇಕಡ 7 ರಿಂದ 20 ರಷ್ಟು ಪೋಷಕಾಂಶವನ್ನು ಕಳೆಗಿಡಗಳು ಉಪಯೋಗಿಸುತ್ತವೆ.
3 ಇಳುವರಿ: ಫಸಲಿನ ಇಳುವರಿ ಮತ್ತು ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಶೇಕಡ 5-50 ರಷ್ಟು ಫಸಲು ನಷ್ಟವಾಗುತ್ತದೆ. ಕಳೆಗಿಡಗಳಿಂದ ಫಸಲಿನಲ್ಲಿರುವ ಎಣ್ಣೆ ಮತ್ತು ಪ್ರೋಟಿನ್ ಅಂಶ ಕಡಿಮೆಯಾಗುತ್ತದೆ.
4 ರೋಗ ಮತ್ತು ಕೀಟಗಳ ಆಶ್ರಯ ತಾಣ: ಕಳೆಗಿಡಗಳು ಬೆಳೆಯನ್ನು ಬಾಧಿಸುವ ಅನೇಕ ರೋಗ ಮತ್ತು ಕೀಟಗಳಿಗೆ ಆಶ್ರಯ ನೀಡುತ್ತವೆ. ಚಿಕ್‍ವೀಡ್‍ನಲ್ಲಿ ಕುಂಬಳ ಜಾತಿಯ ಬೆಳೆಯಲ್ಲಿ ಕಾಣುವ ಹೇನುಗಳು ಆಶ್ರಯ ಪಡೆದಿರುತ್ತದೆ. ಗೆಜ್ಜರಿಯ ಕಂದುಹುಳ ಮತ್ತು ಬ್ಲೈಟ್ ಕಾಡಿನ ಗೆಜ್ಜರಿಯಲ್ಲಿ ಆಶ್ರಯ ಪಡೆದಿರುತ್ತದೆ. ಗೋಧಿ, ಬಾರ್ಲಿಯ ಕಾಂಡದ ಬಲೆ ಕಟ್ಟುವ ಹುಳ ಕಾಡು ಓಟ್ಸ್‍ನಲ್ಲಿ ಕಂಡುಬರುತ್ತದೆ.
5 ಕೆಲವೊಂದು ಕಳೆಗಿಡಗಳು ಮಣ್ಣಿಗೆ ವಿಷ ಉಣಿಸುತ್ತವೆ. ಇದು ಬೆಳೆಯ ಬೀಜ ಮೊಳಕೆಯೊಡೆಯುವುದನ್ನು ತಡೆಯುತ್ತದೆ. ಕ್ವಾಕ್ ಹುಲ್ಲು ಗೋಧಿ ಮತ್ತು ಬಟಾಣಿ ಬೀಜ ಮೊಳಕೆಯೊಡೆಯುವುದನ್ನು ತಡೆಯುತ್ತದೆ.
6 ಮಣ್ಣಿನ ಮೇಲಿನ ಪರಿಣಾಮ: ಲಂಟಾನದಂತ ಬಹುವಾರ್ಷಿಕ ಕಳೆಗಳು ಮಣ್ಣಿನ ಉತ್ಪಾದಕ ಶಕ್ತಿಯನ್ನು ಕುಂದಿಸುತ್ತದೆ.
7 ಸಾಕು ಪ್ರಾಣಿಗಳ ಮೇಲಿನ ಪರಿಣಾಮ: ಕೆಲವು ಕಳೆಗಿಡಗಳು ಸಾಕು ಪ್ರಾಣಿಗಳಿಗೆ ವಿಷಪೂರಿತವಾಗಿವೆ. ಇನ್ನು ಕೆಲವು ಮಾನವನ ಚರ್ಮದ ತೊಂದರೆಗೆ ಕಾರಣವಾಗಿದೆ. ಹಲವು ಕಳೆಗಳು ಹಾಲಿನ ಉತ್ಪಾದನೆ ಮತ್ತು ಉಣ್ಣೆಯ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ.
ಕಳೆಗಳ ವರ್ಗೀಕರಣ
ಕಳೆಗಳನ್ನು ಹಲವಾರು ವಿಧವಾಗಿ ವರ್ಗೀಕರಿಸಬಹುದು
1 ವಾರ್ಷಿಕ ಕಳೆಗಳು: ಈ ಗುಂಪಿಗೆ ಸೇರಿದ ಕಳೆಗಳು ತಮ್ಮ ಜೀವನ ಚಕ್ರವನ್ನು ಒಂದು ವರ್ಷದಲ್ಲಿ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಪೂರೈಸುತ್ತದೆ. ಇವನ್ನು ಮತ್ತೆ ಈ ಕೆಳಗಿನಂತೆ ವರ್ಗಿಕರಿಸಿದೆ.
ಮಳೆಗಾಲದ ಕಳೆ: ಕಳೆಗಳು ಮಳೆಗಾಲದಲ್ಲಿ ಬೆಳೆಯುತ್ತವೆ.
ರಾಬಿಕಾಲದ ಕಳೆ: ಅಕ್ಟೋಬರ್-ನವೆಂಬರ್ ಸಮಯದಲ್ಲಿ ಬೆಳೆದು ಮಾರ್ಚ್-ಎಪ್ರಿಲ್ ಸಮಯದಲ್ಲಿ ಜೀವನ ಚಕ್ರ ಪೂರೈಸುತ್ತದೆ. ಉದಾ: ಚೆನೊ ಪೋಡಿಯಂ, ಮೆಲಿ ಲೋಟಸ್, ಫಲ್ಲಿಸ್ ಮೈನರ್.
2 ದ್ವೈವಾರ್ಷಿಕ ಕಳೆಗಳು: ಜೀವನ ಚಕ್ರ ಪೂರೈಸಲು 2 ವರ್ಷದಷ್ಟು ಅವಧಿ ಬೇಕು. ಪ್ರಥಮ ವರ್ಷದಲ್ಲಿ ಗಿಡದ ಬೆಳವಣಿಗೆಯಾಗಿ, ಎರಡನೆ ವರ್ಷದಲ್ಲಿ ಬೀಜ ಉತ್ಪತಿಯಾಗುತ್ತದೆ ಉದಾ: ಕಾಡಗೆಜ್ಜರಿ.
3 ಬಹುವಾರ್ಷಿಕ ಕಳೆಗಳು: ಇವು ಅನೇಕ ವರ್ಷಗಳವರೆಗೆ ಬದುಕಿರುತ್ತವೆ. ಇವು ಬೆಳೆಯುತ್ತಲೇ ಇದ್ದು ಬೀಜೋತ್ಪಾದನೆ ಆಗುತ್ತಲೇ ಇರುತ್ತದೆ. ಗೆಡ್ಡೆ, ಬಲ್ಬ್, ಬೀಜದ ಮುಖಾಂತರ ವಂಶಾಭಿವೃದ್ಧಿಯಾಗುತ್ತದೆ. ಉದಾ: ಸೈಪ್ರಸ್, ಆನೆಹುಲ್ಲು, ಲಂಟಾನ.
ಎಲೆ ಅಳತೆಯ ಆಧಾರದಲ್ಲಿ
1 ಅಗಲ ಎಲೆಯ ಕಳೆಗಿಡಗಳು: ಕಳೆಗಿಡಗಳ ಎಲೆಗಳು ಅಗಲವಾಗಿದ್ದು ಮೆದುವಾಗಿದೆ.
ಉದಾ: ಚೆನೊ ಪೋಡಿಯಂ, ಕಾಡು ಹರಿವೆ.
2 ಕಿರಿದಾದ ಎಲೆಯ ಕಳೆಗಿಡ: ಕಿರಿದಾದ ಎಲೆಯನ್ನು ಹೊಂದಿದ್ದು ಸಾಮಾನ್ಯವಾಗಿ ಗಟ್ಟಿಯಾಗಿರುತ್ತದೆ. ಉದಾ: ಸೈಪ್ರಸ್, ಫಲ್ಸಿಸ್ ಮೈನರ್, ಕಾಡು ಈರುಳ್ಳಿ, ಆನೆ ಹುಲ್ಲು.
ಸಸ್ಯ ಶಾಸ್ತ್ರೀಯ ವಿಂಗಡಣೆ
ಬೀಜದಲ್ಲಿರುವ ಬೀಜದಳದ ಆಧಾರದ ಮೇಲೆ ಕಳೆಗಿಡಗಳನ್ನು ವರ್ಗೀಕರಿಸಲಾಗಿದೆ
ಏಕದಳ ಕಳೆ: ಬೀಜ ಒಂದು ಬೀಜದಳವನ್ನು ಹೊಂದಿದೆ. ಉದಾ: ಸೈಪ್ರಸ್, ಫಲ್ಸಿಸ್ ಮೈನರ್.
ದ್ವಿದಳ ಕಳೆ:- ಎರಡು ಬೀಜದಳಗಳನ್ನು ಹೊಂದಿದೆ. ಉದಾ: ಚೆನೊ ಪೋಡಿಯಂ, ಸೊಲೇನಂ.
ಕಳೆಗಳ ಅಭಿವೃದ್ಧಿ
ಬೀಜ, ಬೇರು, ಕಾಂಡ, ಗೆಡ್ಡೆ ಮತ್ತು ಎಲೆಗಳ ಮೂಲಕ ಕಳೆ ಗಿಡಗಳು ಅಭಿವೃದ್ಧಿ ಹೊಂದುತ್ತವೆ. ಹೆಚ್ಚಿನ ಕಳೆ ಗಿಡಗಳು ಬೀಜಗಳ ಮೂಲಕ ಅಭಿವೃದ್ಧಿ ಹೊಂದುತ್ತದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಬೀಜಗಳ ಹರಡುವಿಕೆ
ಕಳೆಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹಲವಾರು ವಿಧಾನದಿಂದ ಹರಡುತ್ತವೆ. ಹೆಚ್ಚಿನ ಕಳೆಯ ಬೀಜಗಳು ಹಗುರವಾಗಿರುವುದರಿಂದ ಗಾಳಿಯ ಮೂಲಕ ಹರಡುತ್ತದೆ. ಪ್ರಾಣಿ ಮತ್ತು ಮಾನವನ ಮೂಲಕ ಕೂಡ ಕಳೆ ಹರಡುತ್ತದೆ. ಕೆಲವೊಮ್ಮೆ ಬೆಳೆಯ ಬೀಜ, ಕೃಷಿ ಸಲಕರಣೆಗಳು ಮತ್ತು ನೀರಿನ ಮೂಲಕ ಹರಡಲ್ಪಡುತ್ತದೆ.

ಕಳೆನಿಯಂತ್ರಣ
ಕಳೆಗಳು ಫಸಲಿಗೆ ಹೆಚ್ಚಿನ ನಷ್ಟವನ್ನುಂಟುಮಾಡುತ್ತದೆ. ಉತ್ತಮ ಇಳುವರಿ ಮತ್ತು ಗುಣ ಮಟ್ಟದ ಇಳುವರಿಗಾಗಿ ಕಳೆಗಳನ್ನು ನಿಯಂತ್ರಿಸುವುದು ಅವಶ್ಯವಾಗಿದೆ. ಕಳೆನಿಯಂತ್ರಣ ವಿಧಾನವನ್ನು ಎರಡು ವಿಭಾಗವಾಗಿ ವರ್ಗೀಕರಿಸಲಾಗಿದೆ.

ಅ) ಪ್ರತಿಬಂಧಕ ಕ್ರಮ
ಈ ವಿಧಾನದಲ್ಲಿ ಹೊಸ ಪ್ರದೇಶಕ್ಕೆ ಕಳೆ ಪಸರಿಸುವುದನ್ನು ನಿರ್ಬಂಧಿಸಲಾಗುತ್ತದೆ. ಕಳೆಗಳು ವಿಸ್ತರಿಸುವುದನ್ನು ಮತ್ತು ಹರಡುವುದನ್ನು ತಡೆಯಲು ಕೆಳಗಿನ ಕ್ರಮಗಳನ್ನು ಅನುಸರಿಸಲಾಗುತ್ತದೆ.
1 ಶುದ್ಧೀಕರಿಸಿದ ಬೀಜದ ಬಿತ್ತನೆ: ಫಸಲಿನ ಬೀಜವನ್ನು ಶುದ್ಧೀಕರಿಸುವುದರಿಂದ ಹೊಸ ಕಳೆಗಳು ಜಮೀನಿನಲ್ಲಿ ಬೆಳೆಯಲಾರವು ಮತ್ತು ಅವುಗಳ ಸಂಖ್ಯೆ ಕಡಿಮೆಯಾಗುವುದು.
2 ಕೃಷಿ ಸಲಕರಣೆಗಳನ್ನು ಶುಚಿಗೊಳಿಸುವುದು: ಕೃಷಿ ಸಲಕರಣೆಗಳನ್ನು ಜಮೀನಿನಲ್ಲಿ ಉಪಯೋಗಿಸಿದಾಗ ಕಳೆಯ ಗೆಡ್ಡೆಗಳು, ಬೇರು ಮತ್ತು ದಂಟುಗಳು ಸಲಕರಣೆಗಳಿಗೆ ಅಂಟಿಕೊಳ್ಳುತ್ತವೆ. ಇನ್ನೊಂದು ಜಮೀನಿಗೆ ಕೆಲಸಕ್ಕೆ ಹೋಗುವಾಗ ಸಲಕರಣೆಗಳನ್ನು ಶುಚಿಗೊಳಿಸಬೇಕು.
3 ನೀರಾವರಿ ಕಾಲುವೆಗಳನ್ನು ಶುಚಿಗೊಳಿಸುವುದು: ಸಸಿಗಳಿಗೆ ನೀರು ಹರಿಸುವುದರ ಮೂಲಕವು ಕಳೆಯ ಬೀಜಗಳು ಜಮೀನನ್ನು ಪ್ರವೇಶಿಸುತ್ತದೆ. ಹಾಗಾಗಿ ನೀರು ಹರಿಸುವ ಕಾಲುವೆಗಳನ್ನು ಕಳೆ ಮುಕ್ತವಾಗಿಡಬೇಕು.
4 ಸಾಕು ಪ್ರಾಣಿಗಳ ಮೇವಿನಲ್ಲಿ ಕಳೆ ಬೀಜಗಳು ಇಲ್ಲದಂತೆ ನೋಡಿಕೊಳ್ಳಬೇಕು. ಇದರಿಂದ ಸಾವಯವ ಅಥವಾ ಕೊಟ್ಟಿಗೆ ಗೊಬ್ಬರದ ಮೂಲಕ ಕಳೆಗಳು ಹರಡುವುದನ್ನು ತಡೆಗಟ್ಟಬಹುದು..
5. ಹೆಚ್ಚಿನ ಕಳೆಗಳು ಸಾವಯವ ಮತ್ತು ಕೊಟ್ಟಿಗೆ ಗೊಬ್ಬರದ ಮೂಲಕ ಹರಡುತ್ತವೆ. ಆದ್ದರಿಂದ ಇಂತ ಗೊಬ್ಬರಗಳನ್ನು ಕಳೆಬೀಜ ಮುಕ್ತವಾಗಿಸಬೇಕು.
6.ಬದುಗಳಲ್ಲಿ ಮತ್ತು ಹಾದಿಗಳಲ್ಲಿರುವ ಕಳೆಗಳನ್ನು ನಿಯಂತ್ರಣದಲ್ಲಿಟ್ಟರೆ ಅವುಗಳ ಹರಡುವಿಕೆ ಕಮ್ಮಿಯಾಗುತ್ತದೆ.
ಪರಿಹಾರ ಕ್ರಮ
ಜಮೀನು ಪ್ರವೇಶಿಸಿದ ಕಳೆಗಿಡಗಳನ್ನು ನಿಯಂತ್ರಿಸಬೇಕು. ಒಂದು ಪ್ರದೇಶದಿಂದ ಕಳೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದನ್ನು ಕಳೆ ನಿರ್ಮೂಲನೆ ಎಂದು ಕರೆಯುತ್ತಾರೆ. ಕಳೆ ನಿರ್ಮೂಲನೆ ಕಷ್ಟ ಮತ್ತು ಖರ್ಚುದಾಯಕ. ಆದ್ದರಿಂದ ಕಳೆಯ ಸಾಂದ್ರತೆಯನ್ನು ಕಡಿಮೆ ಮಾಡಲು ಒತ್ತು ಕೊಟ್ಟು ಇಳುವರಿಯಲ್ಲಿ ಕಡಿಮೆ ನಷ್ಟವಾಗುವಂತೆ ನೋಡಿಕೊಳ್ಳಬೇಕು. ಕಳೆ ಹತೋಟಿಗಾಗಿ ಅನೇಕ ವಿಧಾನಗಳಿವೆ ಅವುಗಳು ಈ ಕೆಳಗಿನಂತಿವೆ.

ಯಾಂತ್ರಿಕ ವಿಧಾನ
ಕಳೆತೆಗೆಯಲು ಚಿಕ್ಕ ಸಲಕರಣೆಗಳು ಅಥವಾ ಯಂತ್ರವನ್ನು ಉಪಯೋಗಿಸುತ್ತಾರೆ. ಯಾವ ಸಲಕರಣೆಯನ್ನು ಹೇಗೆ ಉಪಯೋಗಿಸಬೇಕೆಂಬುದು ಕಳೆಯ ಸಾಂದ್ರತೆಯನ್ನು ಅವಲಂಬಿಸಿದೆ.
1. ಕೈಯಿಂದ ಹೆಕ್ಕಿ ತೆಗೆಯುವುದು: ಚಿಕ್ಕ ಪ್ರದೇಶಗಳಾದ ಹುಲ್ಲು ಹಾಸು, ನರ್ಸರಿ, ಹಿತ್ತಲ ತೋಟದಲ್ಲಿ ಈ ವಿಧಾನ ಜಾರಿಯಲ್ಲಿದೆ. ಇದು ಖರ್ಚುದಾಯಕ ಮತ್ತು ಸಮಯವು ಹೆಚ್ಚು ಬೇಕಾಗುತ್ತದೆ.
2. ಕೈಯಿಂದ ಉಪಯೋಗಿಸುವ ಸಲಕರಣೆ: ಸನಿಕೆ, ಗುದ್ದಲಿ ಮುಂತಾದವು ಕಳೆತೆಗೆಯಲು ಕೈಯಿಂದ ಉಪಯೋಗಿಸುವ ಸಲಕರಣೆಗಳು. ಚಿಕ್ಕ ಪ್ರದೇಶಕ್ಕೆ ಸೂಕ್ತವಾಗಿದೆ.
3. ಮುಚ್ಚಳಿಕೆ ಹೊದಿಸವುದು: ಒಣಗಿದ ವಸ್ತುಗಳನ್ನು ಪದರವಾಗಿ ಮುಚ್ಚುವುದರಿಂದ ಕಳೆ ಬೆಳೆಯಲು ತಡೆಯೊಡ್ಡುತ್ತದೆ. ಬೆಳೆಯ ಉಳಿಕೆ, ಮರದ ಹುಡಿ, ಪ್ಲಾಸ್ಟಿಕ್ ಹಾಳೆ ಮುಂತಾದವನ್ನು ಮುಚ್ಚಳಿಕೆಯಾಗಿ ಬಳಸುತ್ತಾರೆ. ಕಳೆಯ ನಿಯಂತ್ರಣ ಪ್ರಮಾಣ ಮುಚ್ಚಳಿಕೆಯನ್ನು ಅವಲಂಬಿಸಿದೆ. ಮುಚ್ಚಳಿಕೆಯಿಂದ ಮಣ್ಣಿನ ತೇವಾಂಶವನ್ನು ಸಹ ಉಳಿಸಬಹುದು.
4. ನೀರಿನಿಂದ ಮುಳುಗಿಸುವುದು: ತಗ್ಗಿನ ಪ್ರದೇಶದಲ್ಲಿ ಈ ವಿಧಾನವನ್ನು ಅಳವಡಿಸುತ್ತಾರೆ. 3-5 ದಿನದವರೆಗೆ ಪ್ರದೇಶದಲ್ಲಿ ನೀರು ಹರಿಸಿ ಕಳೆಯನ್ನು ನೀರಿನಲ್ಲಿ ಮುಳುಗಿಸುತ್ತಾರೆ. ಉಸಿರಾಟಕ್ಕೆ ತೊಂದರೆಯಾಗಿ ಬೀಜಗಳು ಸಾಯುತ್ತವೆ.
5. ಸುಡುವುದರಿಂದ: ಬಿತ್ತನೆ ಅಥವಾ ನಾಟಿಗಿಂತ ಮೊದಲೇ ಈ ವಿಧಾನ ಅನುಸರಿಸಬೇಕು. ಬೆಳೆಯಿರುವ ಪ್ರಧೇಶದಲ್ಲಿ ಈ ವಿಧಾನವನ್ನು ಅನುಸರಿಸಲಾಗದು.
6. ಉಳುಮೆಯಿಂದ: ನಿಯಮಿತ ಉಳುಮೆ ಅಥವಾ ಕೃಷಿಯಿಂದ ಕಳೆ ನಿಯಂತ್ರಣವಾಗುತ್ತದೆ. ಬೇಸಿಗೆಯಲ್ಲಿ ನೀರು ಹಾಯಿಸಿ ಉಳುಮೆ ಮಾಡುವುದರಿಂದ ಕಳೆಯ ಸಾಂದ್ರತೆ ಕಡಿಮೆಯಾಗುತ್ತದೆ.
ಬೇಸಾಯ ವಿಧಾನ
1. ಬೆಳೆ ಮತ್ತು ತಳಿಗಳ ಆಯ್ಕೆ: ಬೇಗನೆ ಬೆಳೆಯುವ ಮತ್ತು ಹರಡುವ ಬೆಳೆಗಳು ಎಲ್ಲಾ ಸ್ಥಳವನ್ನು ಆವರಿಸುವುದರಿಂದ ಕಳೆಯ ಬೆಳವಣಿಗೆ ಕಡಿಮೆಯಾಗುತ್ತದೆ. ಆದ್ದರಿಂದ ಇಂತ ತಳಿಗಳನ್ನು ಆಯ್ಕೆ ಮಾಡುವುದು ಸೂಕ್ತ.
2. ಬೆಳೆ ಆವರ್ತನ: ಒಂದು ಪ್ರದೇಶದಲ್ಲಿ ಒಂದೇ ಬೆಳೆಯನ್ನು ಅನೇಕ ಬಾರಿ ಬೆಳೆದರೆ ಅನೇಕ ಕಳೆಗಳು ಹುಟ್ಟಿಕೊಳ್ಳುತ್ತವೆ. ಬೆಳೆ ಆವರ್ತನ ಮಾಡುವುದರಿಂದ ಕಳೆಯ ಪ್ರಮಾಣ ಕಡಿಮೆಯಾತ್ತದೆ.
3. ಬಿತ್ತನೆ ಸಮಯ: ಸರಿಯಾದ ಸಮಯದಲ್ಲಿ ಬಿತ್ತನೆ ಮಾಡುವುದರಿಂದ ಕಳೆಯ ಪ್ರಮಾಣ ಕಡಿಮೆಯಾಗುತ್ತದೆ.
4. ಗಿಡಗಳ ಅಂತರ ಮತ್ತು ಸಾಂದ್ರತೆ: ಅನಕೂಲಕರ ಅಂತರವಿಟ್ಟು ದಟ್ಟವಾಗಿ ಗಿಡಗಳನ್ನು ನೆಟ್ಟರೆ ಕಳೆಗಳನ್ನು ಬೆಳೆಯಲು ಬಿಡಲಾರವು. ಕಡಿಮೆ ಮೊಳಕೆಯ ಪ್ರಮಾಣ ಮತ್ತು ಗಿಡಗಳಿಗೆ ಹೆಚ್ಚು ಅಂತರವಿದ್ದಲ್ಲಿ ಕಳೆ ಬೆಳೆಯಲು ಅವಕಾಶ ಒದಗಿಸಿದಂತಾಗುತ್ತದೆ.
ಜೈವಿಕ ನಿಯಂತ್ರಣ
ಈ ವಿಧಾನದಲ್ಲಿ ಕೀಟ ಮತ್ತು ಸೂಕ್ಷ್ಮಾಣು ಜೀವಿಗಳ ಬಳಕೆಯಾಗುತ್ತದೆ. ಕೀಟ ಮತ್ತು ಸೂಕ್ಷ್ಮಾಣು ಜೀವಿಗಳು ಕಳೆಗಳನ್ನು ಭಕ್ಷಿಸುವುದರಿಂದ ಅವುಗಳ ಸಂಖ್ಯೆ ಮತ್ತು ಬೆಳವಣಿಗೆ ಕಡಿಮೆಯಾಗುತ್ತದೆ. ಭಾರತದಲ್ಲಿ ಜೈವಿಕ ನಿಯಂತ್ರಣ ಅಷ್ಟೇನೂ ಹೆಚ್ಚಾಗಿ ಉಪಯೋಗದಲ್ಲಿ ಇಲ್ಲ. ಲಂಟಾನ ಮತ್ತು ಪ್ರಿಕ್‍ಲಿ ಪೇರ್‍ಗಳಲ್ಲಿ ಯಶಸ್ಸು ಕಂಡಿದೆ.

ರಾಸಾಯನಿಕ ನಿಯಂತ್ರಣ
ಗಿಡಗಳಿಗೆ ಹಾನಿ ಉಂಟುಮಾಡುವ ರಾಸಾಯನಿಕಗಳನ್ನು ಈ ವಿಧಾನದಲ್ಲಿ ಬಳಸಲಾಗುವುದು. ಕಳೆನಾಶಕವೆಂದು ಕರೆಯಲ್ಪಡುವ ಇವುಗಳನ್ನು ಕಳೆನಿರ್ಮೂಲನೆ ಮಾಡಲು ಉಪಯೋಗಿಸುತ್ತಾರೆ. ಕಳೆನಾಶಕಗಳÀನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.

ನಿರ್ಧಿಷ್ಟ ಕಳೆನಾಶಕ: ಅಗತ್ಯ ಗಿಡಗಳಿಗೆ ಹಾನಿ ಮಾಡದೆ ನಿರ್ದಿಷ್ಟವಾದ ಕಳೆ ಗಿಡಗಳಿಗೆ ಹಾನಿಮಾಡುತ್ತದೆ. 2, 4 ಡಿ ಎಂಬ ಕಳೆನಾಶಕ ಗೋಧಿ ಜಮೀನಿನಲ್ಲಿ ಬಳಸಿದಾಗ ಗೋಧಿ ಬೆಳೆಗೆ ಹಾನಿ ಮಾಡದೆ ಅಗಲ ಎಲೆಯ ಕಳೆಯನ್ನು ನಾಶ ಮಾಡುತ್ತದೆ. ಹಾಗೆನೆ ಪ್ರೋಟಾನ್ ಬೆಳೆಗೆ ಹಾನಿಗೊಳಿಸದೆ ಫಲಾಸಿಸ್ ಮೈನೂರ್ ಎಂಬ ಕಳೆಯನ್ನು ನಾಶಮಾಡುತ್ತದೆ.

ನಿರ್ದಿಷ್ಟವಲ್ಲದ ಕಳೆನಾಶಕ: ಇವು ಎಲ್ಲಾ ಗಿಡಗಳನ್ನು ನಾಶ ಪಡಿಸುತ್ತವೆ. ಆದ್ದರಿಂದ ಇವುಗಳನ್ನು ರಸ್ತೆ, ನೀರು ಕಾಲುವೆ, ಬದುಗಳಲ್ಲಿ ಉಪಯೋಗಿಸುತ್ತಾರೆ ಪಾರಾಕ್ಪಾಟ್, ಡೆಲಿಪಾನ್, ಗ್ಲೈಸೆಲ್ ಹೆಚ್ಚು ಪ್ರಸ್ತುತಿಯಲ್ಲಿರುವ ಕಳೆನಾಶಕಗಳು.

ಸಮಯಕ್ಕನುಸಾರವಾಗಿ ಉಪಯೋಗಿಸುವ ಕಳೆನಾಶಕಗಳು
1. ಕಳೆ ಉದ್ಭವಿಸುವುದಕ್ಕಿಂತ ಮೊದಲೇ ಬಳಸುವ ಕಳೆನಾಶಕ: ಕಳೆಯ ಬೀಜ ಮೊಳಕೆ ಬರುವುದಕ್ಕಿಂತ ಮತ್ತು ಬೆಳೆಯ ನಾಟಿಗಿಂತ ಮೊದಲೇ ಬಳಸುವ ಕಳೆನಾಶಕ. ಕಳೆಯ ಬೀಜದ ಮೊಳಕೆಗೆ ತಡೆಯೊಡ್ಡುತ್ತದೆ. ಆಕ್ಷಿಪೂರೊಫೆನ್, ಲಾಸ್ಸೊ, ಪೆಂಡಿ ಮೆಥ್ರಿನ್ ಈ ಗುಂಪಿಗೆ ಸೇರಿದ ಕಳೆನಾಶಕಗಳು.

2. ಕಳೆ ಉದ್ಭವಿಸಿದ ನಂತರದ ಕಳೆನಾಶಕ: ಬೆಳೆಯ ನಾಟಿಯನಂತರ ಉಪಯೋಗಿಸುವ ಕಳೆನಾಶಕ. ಇದು ನಿರ್ದಿಷ್ಟ ಕಳೆಯನ್ನು ನಾಶಪಡಿಸುತ್ತದೆ. 2, 4 ಡಿ, ಪೆಂಡಿಮೆಥ್ರಿನ್ ಈ ಗುಂಪಿಗೆ ಸೇರಿದ ಕಳೆನಾಶಕಗಳು.
ಕಾರ್ಯಕ್ರಮತೆಯ ಆಧಾರದಲ್ಲಿ ಕಳೆನಾಶಕಗಳನ್ನು ಇನ್ನೊಂದು ವರ್ಗೀಕರಣ ಮಾಡಲಾಗಿದೆ. ಇವುಗಳಲ್ಲಿ ಎರಡು ವಿಧಗಳಿವೆ 1) ಸಂಪರ್ಕ ಕಳೆನಾಶಕ 2) ಅಂತರ್‍ವ್ಯಾಪಿ ಕಳೆನಾಶಕ
ಬಳಸುವ ಪ್ರಮಾಣ, ಸಮಯ ಮತ್ತು ಸಿಂಪಡಿಸುವ ರೀತಿಯನ್ನು ಅವಲಂಬಿಸಿ ಕಳೆನಾಶಕಗಳು ಕಳೆಗಳ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಉಪಯೋಗಿಸುವ ಮೊದಲು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಡಬೇಕು.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments