ಬೆಳೆ ತ್ಯಾಜ್ಯ ನಿರ್ವಹಣೆ
ಸಾವಯವ ಪದ್ಧತಿಯಿಂದ ಹಲವಾರು ಉಪಯೋಗಗಳಿವೆ. ಮಣ್ಣಿನ ಫಲವತ್ತತೆಯಲ್ಲಿ ಸುಧಾರಣೆ, ನೀರಿನ ಗುಣಮಟ್ಟದಲ್ಲಿ ಏರಿಕೆ, ಮಣ್ಣಿನ ಸವಕಳಿ ತಡೆ ಮತ್ತು ಗ್ರಾಮೀಣ ಜನರಿಗೆ ಉದ್ಯೋಗವನ್ನು ಒದಗಿಸಿವೆ. ವಿಶ್ವದಲ್ಲಿ ಸಾವಯವ ಉತ್ಪನ್ನಗಳಿಗೆ ಅಂದಾಜು 8000 ಕೋಟಿ ವಹಿವಾಟು ಇದೆ. ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಾರ್ಷಿಕ ಶೇಕಡ 15 ರಿಂದ 30ರ ಗತಿಯಲ್ಲಿ ಬೆಳೆಯುತ್ತಿದೆ. ಹಣ್ಣು, ತರಕಾರಿ, ಕೊಕೋ, ಸಂಬಾರ ಪದಾರ್ಥ, ಔಷಧಗಳು, ಎಣ್ಣೆಕಾಳು, ಮಾಂಸ, ಡೈರಿ ಉತ್ಪನ್ನಗಳು, ಮದ್ಯದ ಉತ್ಪನ್ನಗಳು, ಸಂಸ್ಕರಣೆಯಾದ ಆಹಾರ ಇವು ವಿಶ್ವದಲ್ಲಿ ಮಾರಾಟವಾಗುವ ಪ್ರಮುಖ ಸಾವಯವ ಆಹಾರ ಉತ್ಪನ್ನಗಳು. ಹತ್ತಿ, ಕತ್ತರಿಸಿದ ಹೂಗಳು ಮತ್ತು ಕುಂಡದಲ್ಲಿ ಬೆಳೆದ ಸಾವಯವ ಗಿಡಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆಗೆ ಇರುವ ಇತರ ವಸ್ತುಗಳು. ತಾಜಾ ಹಣ್ಣು ಮತ್ತು ತರಕಾರಿಕೆಗೆ ಬೇಡಿಕೆ ಹೆಚ್ಚುತ್ತಿದೆ. ಹೆಚ್ಚಿನ ಹಣ್ಣು ತರಕಾರಿಗಳನ್ನು ಹಸಿಯಾಗಿಯೂ, ಸಲಾಡ್ ರೂಪದಲ್ಲಿ ಬಳಸುವುದರಿಂದ ಸಾವಯವ ಪದಾರ್ಧಗಳ ಉತ್ಪಾದನೆ ಅವಶ್ಯವಾಗಿದೆ. ಸಾವಯವ ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾವಯವ ಗೊಬ್ಬರದಲ್ಲಿ ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿರುವುದರಿಂದ ಅಗಾಧ ಮೊತ್ತದಲ್ಲಿ ಬಳಸಬೇಕಾಗುತ್ತದೆ ಮತ್ತು ನಿಗದಿತವಾಗಿ ದೊರೆಯುವುದಿಲ್ಲ. ಕೃಷಿ ತ್ಯಾಜ್ಯಗಳನ್ನು ಪುನರ್ಬಳಕೆ ಮಾಡುವುದು ಒಂದು ಉತ್ತಮ ಪರ್ಯಾಯ. ದೇಶದಲ್ಲಿ ಸುಮಾರು 600-700 ಮಿಲಿಯ ಟನ್ ಕೃಷಿ ತ್ಯಾಜ್ಯವು ಪ್ರತಿ ವರ್ಷ ಉತ್ಪತ್ತಿಯಾಗುತ್ತದೆಂದು ಅಂದಾಜಿಸಲಾಗಿದೆ.
ಹಣ್ಣಿನ ಬೆಳೆಗಳಿಂದ ಸಾಕಷ್ಟು ಸಾವಯವ ತ್ಯಾಜ್ಯ ವಸ್ತುಗಳು ದೊರೆಯುತ್ತದೆ. ಒಂದು ಹೆಕ್ಟೇರು ಪ್ರದೇಶದಿಂದ 8-10 ಟನ್ ಹಸಿರೆಲೆ 1 ಟನ್ ಒಣಗಿದ ಎಲೆ ಸಿಗುತ್ತದೆ ಎಂದು ಅಂದಾಜಿಲಾಗಿದೆ. ಒಟ್ಟಾರೆ 3-4 ಟನ್ ತ್ಯಾಜ್ಯ ವಸ್ತುಗಳು 1 ಹೆಕ್ಟೇರು ಪ್ರದೇಶದಿಂದ ದೊರೆಯುತ್ತದೆ. ಇಂತಹ ವಸ್ತುಗಳನ್ನು ಉಪಯೋಗಿಸಲು ಹಲವು ವಿಧಾನಗಳಿವೆ. ವ್ಯರ್ಥ ವಸ್ತುಗಳನ್ನು ಮಿಶ್ರಣ ಮಾಡಿ ಜೈವಿಕ ಗೊಬ್ಬರ ತಯಾರಿಸುವುದು ಒಂದು ವಿಧಾನ. ಜೈವಿಕ ಗೊಬ್ಬರ ಸಾವಯವ ಕೃಷಿಗೆ ಪೋಷಕಾಂಶಗಳನ್ನು ಒದಗಿಸುವ ಮೂಲವಾಗಿದೆ. ಸಸ್ಯ ಮತ್ತು ಪ್ರಾಣಿ ತ್ಯಾಜ್ಯಗಳನ್ನು ಗುಂಡಿಯಲ್ಲಿ ತುಂಬಿ ಅಥವಾ ಗುಡ್ಡೆ ಮಾಡಿ ಕೊಳೆಯಿಸಿ ಸಾವಯವ ಗೊಬ್ಬರವಾಗಿ ಪರಿವರ್ತಿಸುವುದನ್ನು ಕಾಂಪೋಸ್ಟಿಂಗ್ ಎಂದು ಕರೆಯುತ್ತಾರೆ. ಗಾಳಿ ರಹಿತ ಕೊಳೆಯುವಿಕೆಯಿಂದಾದ ಗೊಬ್ಬರವು ಗಾಳಿ ಸಹಿತ ಕೊಳೆಯುವಿಕೆಯಿಂದಾದ ಗೊಬ್ಬರಕ್ಕಿಂತ ಕಡಿಮೆ ಪೋಷಕಾಂಶದಿಂದ ಕೂಡಿದೆ.
1 ಕೆ.ಜಿ. ಒಣಗಿದ ಕೃಷಿ ತ್ಯಾಜ್ಯದಲ್ಲಿ ಶೇಕಡ 0.40 ರಿಂದ 3.5 ಸಾರಜನಕ, ಶೇಕಡ 0.10 ರಿಂದ 2.41 ರವರೆಗೆ ರಂಜಕ ಮತ್ತು ಶೇಕಡ 0.40-2.42 ಪೊಟ್ಯಾಷಿನ ಅಂಶ ಇರುತ್ತದೆ.
ಕೃಷಿ ತ್ಯಾಜ್ಯ ಸಿ:ಎನ್ ಪ್ರಮಾಣ 40:1 ರಿಂದ 50:1 ಇದೆ. ಆದ್ದರಿಂದ ಕೊಳೆಯಲು ಸಾಕಷ್ಟು ತೇವಾಂಶದ ಅವಶ್ಯಕತೆ ಇದೆ. ಜಮೀನಿನ ವಾತಾವರಣ ತ್ಯಾಜ್ಯಗಳನ್ನು ಬೇಗನೆ ಕೊಳೆಯಲು ಬಿಡುವುದಿಲ್ಲ. ಹಾಗಾಗಿ ಕೃಷಿ ತ್ಯಾಜ್ಯಗಳನ್ನು ನೇರವಾಗಿ ಗಿಡಗಳಿಗೆ ಒದಗಿಸಲು ಶಿಪಾರಸ್ಸು ಮಾಡಲಾಗುವುದಿಲ್ಲ. ಕೃಷಿ ತ್ಯಾಜ್ಯವನ್ನು ಜಮೀನಿನಲ್ಲಿ ಅಥವಾ ಬೇರೆಡೆ ಕೊಳೆಯಿಸಿ ಗಿಡಗಳಿಗೆ ಒದಗಿಸಬೇಕು. ಗೊಬ್ಬರ ತಯಾರಿಸಲು ಹಲವಾರು ವಿಧಾನಗಳಿವೆ.
1 ಗುಂಡಿಯಲ್ಲಿ ತುಂಬಿಸುವುದು
2 ಗುಡ್ಡೆ ಮಾಡುವುದು
3 ಎನ್.ಡಿ.ಇ.ಪಿ ಗುಂಡಿ
4 ಎರೆಹುಳ ಗೊಬ್ಬರ ಮತ್ತು ಎರೆಹುಳ ದ್ರವ
ಎರೆಹುಳ ಗೊಬ್ಬರ ಮತ್ತು ಎರೆಹುಳ ದ್ರವಕ್ಕೆ ಹೋಲಿಸಿದರೆ ಎನ್.ಡಿ.ಇ.ಪಿ ಗೊಬ್ಬರ ಹೊಸ ವಿಧಾನವಾಗಿದ್ದು ಸಾವಯವ ಕೃಷಿಯಲ್ಲಿ ಬಳಕೆಯಲ್ಲಿದೆ. ಈ ಗೊಬ್ಬರಗಳು ಕೊಟ್ಟಿಗೆ ಗೊಬ್ಬರ ಮತ್ತು ಹಸಿರು ಗೊಬ್ಬರಕ್ಕಿಂತ ಹೆಚ್ಚು ಪೋಷಕಾಂಶಗಳು ಹೊಂದಿದ್ದು ತ್ಯಾಜ್ಯ ಕೊಳೆಯುವಿಕೆಯಿಂದ ಉಂಟಾಗುವ ಪೋಷಕಾಂಶದ ನಷ್ಟ ಕಡಿಮೆ ಇದೆಯಲ್ಲದೆ, ಕಡಿಮೆ ಕಳೆ ಬೀಜಗಳಿಂದ ಕೂಡಿದೆ. ಇವುಗಳಲ್ಲಿ ಇತರ ಸಾವಯವ ಗೊಬ್ಬರಗಳಲ್ಲಿರಬಹುದಾದ ಬೆಳೆಗೆ ರೋಗ ಹರಡುವ ಸೂಕ್ಷ್ಮಾಣು ಜೀವಿಗಳು ಇರುವುದಿಲ್ಲ.
1. ಕಾಂಪೋಷ್ಟು ಗುಂಡಿ
ಕತ್ತರಿಸಿದ ಕೃಷಿ ತ್ಯಾಜ್ಯವನ್ನು 30’x15’ ಉದ್ದಗಲದ, 2’ ಆಳದ ಗುಂಡಿಯಲ್ಲಿ ತುಂಬಬೇಕು. ಸ್ವಲ್ಪ ಕೊಟ್ಟಿಗೆ ಗೊಬ್ಬರ, ಮಣ್ಣು ಮತ್ತು ಕೊಳೆತ ವಸ್ತುಗಳನ್ನು ತುಂಬಿ ನಿಯಮಿತವಾಗಿ ನೀರು ಹಾಕಬೇಕು. 15, 30, 45 ಮತ್ತು 60 ದಿನಗಳಿಗೊಮ್ಮೆ ಗುಂಡಿಯಲ್ಲಿರುವ ತ್ಯಾಜ್ಯವನ್ನು ತಿರುವುತ್ತಿರಬೇಕು. ಗೊಬ್ಬರವಾದ ನಂತರ ಹೊರ ತೆಗೆದು ಒಣಗಿಸಿ ಜಮೀನಿನಲ್ಲಿ ಬಳಸಬೇಕು. ಪೋಷಕಾಂಶದ ಪ್ರಮಾಣ ಕೃಷಿ ತ್ಯಾಜ್ಯದ ಮೂಲ ವಸ್ತುವನ್ನು ಅವಲಂಬಿಸಿದೆ. ಬಾಳೆಯ ಕಾಂಪೋಷ್ಟು ಶೇಕಡ 1.87 ಸಾರಜನಕ, 3.43 ರಂಜಕ ಮತ್ತು 0.455 ಪೊಟಾಷ್ ನಿಂದ ಕೂಡಿದೆ. ಕಬ್ಬಿನ ಕಾಂಪೋಷ್ಟು ಶೇಕಡ 0.2-0.3 ಸಾರಜನಕ ಹೊಂದಿದೆ.
2. ಎನ್.ಡಿ.ಇ.ಪಿ ಕಾಂಪೋಸ್ಟು ಗುಂಡಿ
ಗಾಳಿಯಾಡುವ ಎನ್.ಡಿ.ಇ.ಪಿ ಕಾಂಪೋಸ್ಟು ಗುಂಡಿಯನ್ನು ಇಟ್ಟಿಗೆಯಿಂದ ಕಟ್ಟಲಾಗುತ್ತದೆ. ಅಗತ್ಯಕ್ಕನುಗುಣವಾಗಿ ಗುಂಡಿಯ ಉದ್ದ ಬೇರೆ ಬೇರೆಯದಾಗಿರುತ್ತದೆ. ಆದರೆ ಗುಂಡಿಯ ಅಗಲ 6 ರಿಂದ 8 ಅಡಿಗಿಂತ ಜಾಸ್ತಿ ಇರಬಾರದು. ಮತ್ತು 3 ರಿಂದ 5 ಅಡಿ ಎತ್ತರವಿರಬೇಕು. ಅನೇಕ ಗುಂಡಿಗಳನ್ನು ಪಕ್ಕ ಪಕ್ಕದಲ್ಲಿ ನಿರ್ಮಾಣ ಮಾಡಬಹುದು. ಕಟ್ಟಡ ಗಟ್ಟಿಯಾಗಿರಲು ಒಂದು ಅಡಿಯ ತಳಪಾಯ ಅಗತ್ಯ. ಕಟ್ಟಡದ ಮೂಲೆಗಳನ್ನು ಇಟ್ಟಿಗೆಯ ಕಂಬಗಳಿಂದ ಬಲವಾಗಿಸಬೇಕು. ಗೋಡೆಯ ಮೇಲೆ 4 ಇಂಚು ದಪ್ಪದ ಕಾಂಕ್ರೀಟ್ ಮಿಶ್ರಣವನ್ನು ಹಾಕಬೇಕು.
ಈರುಳ್ಳಿ ಮತ್ತು ಬೆಳ್ಳುಳ್ಳಿಯ ಗೆಡ್ಡೆಗಳು ಬೇಗನೆ ಕೊಳೆಯಲು ಅದನ್ನು 2-4’’ ದಪ್ಪಕ್ಕೆ ಕೊಚ್ಚಬೇಕು. ವ್ಯರ್ಥ ಈರುಳ್ಳಿ ಮತ್ತು ಕೃಷಿ ತ್ಯಾಜ್ಯ 1:1ರ ಪ್ರಮಾಣದಲ್ಲಿರಬೇಕೆಂದು ಕಂಡು ಬಂದಿದೆ. 4-6 ಇಂಚು ದಪ್ಪ ಪದರದ ಸಾವಯವ ಪದಾರ್ಥಗಳನ್ನು ತುಂಬಿ ಮೇಲಿನಿಂದ ಸಗಣಿ ನೀರಿನಿಂದ ಮುಚ್ಚಬೇಕು. ಈ ರೀತಿ ಪದರು ಪದರಾಗಿ ತುಂಬಿಸುವುದನ್ನು ಗುಂಡಿಯ ಮೇಲ್ಭಾಗಕ್ಕೆ ಬರುವವರೆಗೆ ಮುಂದುವರಿಸಬೇಕು. ಪದರವು ಗುಂಡಿಗಿಂತ 15-30 ಸೆ.ಮೀ ಹೆಚ್ಚು ಎತ್ತರದಲ್ಲಿರಬೇಕು. ಮೇಲ್ಭಾಗವನ್ನು ಸಗಣಿಯಿಂದ ಸಾರಿಸಬೇಕು. ಬೇಸಿಗೆಯಲ್ಲಿ 10-15 ದಿನಗಳಿಗೊಮ್ಮೆ ನೀರು ಹಾಕಬೇಕು. ಇ.ಎಮ್ ದ್ರಾವಣನ್ನು ಹಾಕಿದರೆ ಸಾವಯವ ವಸ್ತುಗಳು ಬೇಗನೆ ಕೊಳೆಯುತ್ತವೆ. 3-4 ತಿಂಗಳಲ್ಲಿ ಕಾಂಪೋಷ್ಟು ಗೊಬ್ಬರ ಬಳಸಲು ತಯಾರಾಗುತ್ತದೆ. ತಯಾರಾದ ಗೊಬ್ಬರವನ್ನು ಚೀಲದಲ್ಲಿ ಶೇಖರಿಸಿಡಬಹುದು, ಇಲ್ಲವೆ ನೇರವಾಗಿ ಜಮೀನಿನಲ್ಲಿ ಬಳಸಬಹುದು. 3 ಕೋಣೆಗಳನ್ನು ಹೊಂದಿದ 30x6x4’ ಯ ಎನ್.ಡಿ.ಇ.ಪಿ ಗುಂಡಿಗೆ ಸುಮಾರು ರೂ 20,000/- ಖರ್ಚು ತಗಲುತ್ತದೆ. ಈ ಕಟ್ಟಡ ಸುಮಾರು 10 ವರ್ಷ ಬಾಳುತ್ತದೆ. ಒಂದು ಘಟಕದಿಂದ ಸುಮಾರು 2-25 ಟನ್ ಸಾವಯವ ಗೊಬ್ಬರವನ್ನು 1 ವರ್ಷಕ್ಕೆ ಉತ್ಪಾದಿಸಬಹುದು. ಇದರಲ್ಲಿ 5 ಹೆಕ್ಟೇರಿನ ಜಮೀನಿನಲ್ಲಿ ದೊರೆಯುವ ತ್ಯಾಜ್ಯವನ್ನು ಸಮರ್ಥವಾಗಿ ಬಳಸಬಹುದು.
4 ಎರೆಗೊಬ್ಬರ
ಎರೆಹುಳುವಿನ ಸಹಾಯದಿಂದ ತಯಾರಾದ ಗೊಬ್ಬರವನ್ನು ಎರೆಗೊಬ್ಬರವೆಂದು ಕರೆಯುತ್ತಾರೆ. ಎರೆಹುಳುಗಳು ಎಲೆಗಳಂಥ ಸಸ್ಯರಾಶಿಯನ್ನು ಅತ್ಯಂತ ಸಮರ್ಥವಾಗಿ ಸಾವಯವ ಗೊಬ್ಬರವಾಗಿ ಪರಿವರ್ತಿಸುತ್ತದೆ. ಕೊಳೆಯುವ ಗುಪ್ಪೆಯಲ್ಲಿ ಉಷ್ಣತೆ ಕಡಿಮೆಯಾದ ನಂತರ ಸಾಧಾರಣವಾಗಿ ಎರೆಹುಳಗಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಎರೆಹುಳು ಸಸ್ಯರಾಶಿಯನ್ನು ತಿಂದು ಅತ್ಯಂತ ಕಡಿಮೆ ಸಮಯದಲ್ಲಿ ಹಿಕ್ಕೆಯ ರೂಪದಲ್ಲಿ ಹೊರಹಾಕುತ್ತವೆ. ಈ ಕ್ರಿಯೆ ಸಾಧಾರಣ ಕಾಂಪೋಷ್ಟು ವಿಧಾನಗಿಂತ ವೇಗವಾಗಿದೆ. ಎರೆಗೊಬ್ಬರದಲ್ಲಿ ಪೋಷಕಾಂಶದ ಪ್ರಮಾಣ ಜಾಸ್ತಿ ಮತ್ತು ನೀರು ಹಿಡಿದಿಡುವ ಹಾಗು ಗಿಡದ ಬೆಳವಣಿಗೆ ಪ್ರಚೋದಿಸುವ ಶಕ್ತಿ ಇದೆ. ಐಸೆನಿಫಾಯಿಟಿಡಾ, ಪರಿಯೋನಿ, ಎಕ್ಸ್ ಕಾವಟನಿ, ಯಾಡ್ರಿಲಸ್ ಯಾಜಿನೀಸಿ ಜಾತಿಯ ಎರೆಹುಳಗಳನ್ನು ಗೊಬ್ಬರ ತಯಾರಿಸಲು ಬಳಸುತ್ತಾರೆ. ತೇವಾಂಶ ಮತ್ತು ಉಷ್ಣತೆಯಲ್ಲಿ ಏರು ಪೇರಾದರೆ ಎರೆಹುಳಗಳು ವೇಗವಾಗಿ ಸ್ಪಂದಿಸುತ್ತವೆ ಮತ್ತು ಅವಕ್ಕೆ ನಿರಂತರವಾಗಿ ಸಾವಯವ ವಸ್ತುಗಳನ್ನು ಒದಗಿಸಬೇಕು. ಇರುವೆ ಮತ್ತು ಗೆದ್ದಲು ಹುಳು ಎರೆಹುಳುವಿಗೆ ಹಾನಿಮಾಡುತ್ತದೆ. ರಸಗೊಬ್ಬರ, ಕೀಟನಾಶಕ, ಮಣ್ಣಿನಿಂದ ಉತ್ಪತ್ತಿಯಾಗುವ ಕೀಟಗಳು, ತೇವಾಂಶzಲ್ಲಿ ಏರುಪೇರು (ಅನುಕೂಲಕರ ತೇವಾಂಶ ಶೇಕಡ 60 ರಿಂದ 65 ರಷ್ಟಿರಬೇಕು) ಮತ್ತು ಆಮ್ಲೀಯ ಗುಣದ ಕೃಷಿ ತ್ಯಾಜ್ಯಕ್ಕೆ ಎರೆಹುಳುಗಳು ಸೂಕ್ಷ್ಮತೆಯನ್ನು ಪ್ರದರ್ಶಿಸುತ್ತವೆ. ಎರೆಗುಂಡಿಗೆ ಗಟ್ಟಿಯಾದ ತಳಹದಿಯಿದ್ದರೆ ಶತ್ರುಗಳಿಂದ ಸುರಕ್ಷಿತವಾಗಿರುತ್ತದೆ. ಉತ್ತಮ ಪೋಷಕಾಂಶಗಳನ್ನು ಹೊಂದಿದ್ದರೂ, ಎರೆಗೊಬ್ಬರಕ್ಕೆ ಹೆಚ್ಚಿನ ಹೂಡಿಕೆ (ಕಟ್ಟಡ ಮತ್ತು ಹುಳು), ಕೆಲಸ ಮತ್ತು ನಿರಂತರ ನಿರ್ವಹಣೆಯಿಂದ ಕಾಂಪೋಷ್ಟಿಗಿಂತ ಹೆಚ್ಚು ವೆಚ್ಚದಾಯಕ.
ಎರೆ ಕಾಂಪೋಷ್ಟನ್ನು 2 ವಿಧದಲ್ಲಿ ತಯಾರಿಸಬಹುದು.
1) ಮಣ್ಣಿನ ಮೇಲ್ಮೈಯಲ್ಲಿ 2) ತೊಟ್ಟಿಗಳನ್ನು ಬಳಸಿ. ವಾತಾವರಣ ಮತ್ತು ನಿರ್ವಹಣೆಯ ಅಂಶವನ್ನು ಗಮನದಲ್ಲಿಟ್ಟು ಎರೆಗೊಬ್ಬರದ ತಯಾರಿಕೆಯನ್ನು ಮಣ್ಣಿನ ಮೇಲ್ಮೈಯಲ್ಲಿ ತಯಾರಿಸುವುದನ್ನು ಆಯ್ಕೆ ಮಾಡಲಾಗುವುದಿಲ್ಲ. ಎರೆ ಗೊಬ್ಬರ ತಯಾರಿಸಲು ವಿಶೇಷ ರೀತಿಯ ತೊಟ್ಟಿಗಳನ್ನು ಬಳಸಲಾಗುವುದು. ಅಗತ್ಯಕ್ಕೆ ಅನುಗುಣವಾಗಿ ತೊಟ್ಟಿಗಳ ಗಾತ್ರ ಬೇರೆ ಬೇರೆಯಾಗಿರುತ್ತದೆ. ಸಾಧಾರಣವಾಗಿ 4’ ಅಗಲದ, 20’ ಉದ್ದದ ಪಾತಿಗಳನ್ನು ಆಯ್ಕೆ ಮಾಡಲಾಗುತ್ತದೆ. ತೊಟ್ಟಿಯ ಆಳ 2.5’ ಇರಬೇಕು. ಹುಲ್ಲು, ಆಸ್‍ಬೆಸ್ಟೋಸ್ ಅಥವಾ ಪ್ಲಾಸ್ಟಿಕ್ ಹಾಳೆಯಿಂದ ನೆರಳು ನೀಡಬೇಕು. ಕಬ್ಬಿಣದ ತಗಡನ್ನು ಉಪಯೋಗಿಸಿದರೆ ಉಷ್ಣತೆ ಹೆಚ್ಚಾಗುತ್ತದೆ. ಬದಿಯನ್ನು ತಂತಿ ಬಲೆಯಿಂದ ಮುಚ್ಚಿದರೆ ಗಾಳಿಯಾಡುತ್ತದೆ ಮತ್ತು ಪಕ್ಷಿ ಹಾಗು ಇತರ ಪ್ರಾಣಿಗಳಿಂದ ರಕ್ಷಣೆ ದೊರೆಯುತ್ತದೆ. ತಯಾರಾದ ಎರೆಗೊಬ್ಬರ ಕಪ್ಪು ಬಣ್ಣದ್ದಾಗಿದ್ದು ಕೆಟ್ಟ ವಾಸನೆಯನ್ನು ಇರುವುದಿಲ್ಲ ಮತ್ತು ಎರೆಹುಳುಗಳು ಮೇಲ್ಮೈಯಲ್ಲಿ ಹಾಗು ತೊಟ್ಟಿಯ ಬದಿಯಲ್ಲಿ ಹರಿಯಲು ಪ್ರಾರಂಭಿಸುತ್ತವೆ. ಗೊಬ್ಬರವನ್ನು ತಗೆಯುವ ಮೊದಲು ಮೇಲ್ಭಾಗವನ್ನು ಒಣಗಲು ಬಿಟ್ಟು, ಹುಳುಗಳು ಒಳ ಹೋಗುವಂತೆ ಮಾಡಬೇಕು. ಒಂದು ತೊಟ್ಟಿಯಿಂದ ವಾರ್ಷಿಕ 20 ಟನ್ ಎರೆಗೊಬ್ಬರ ಉತ್ಪತ್ತಿಯಾಗುತ್ತದೆ. 1 ಕೆ.ಜಿ. ಗೊಬ್ಬರ ಉತ್ಪಾಸಿಲು ರೂ 3.00 ವೆಚ್ಚ ತಗಲುತ್ತದೆ. ತೇವಾಂಶಕ್ಕೆ ತುಂತುರು ಅಥವ ಹನಿ ನೀರಾವರಿ ಒದಗಿಸಿದರೆ ಕಾರ್ಮಿಕ ವೆಚ್ಚ ಕಡಿಮೆಯಾಗುತ್ತದೆ.
ಎರೆದ್ರವ
ಎರೆಗೊಬ್ಬರದ ಗುಪ್ಪೆಗೆ ನೀರು ಚಿಮುಕಿಸಿ ಸಂಗ್ರಹಿಸಿದ ದ್ರವವೇ ಎರೆದ್ರವ. ಸಸ್ಯವರ್ಧಕವಾಗಿದ್ದು ಎಲೆಗೆ ಸಿಂಪಡಿಸಲು ಬಳಸುತ್ತಾರೆ ಹಾಗು ರೋಗ ಮತ್ತು ಕೀಟಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ತಳಭಾಗದಲ್ಲಿ ನಿರ್ಗಮನ ದ್ವಾರವಿರುವ 150-200 ಲೀ. ಅಳತೆಯ ಪಿಪಾಯಿಯಲ್ಲಿ ಕಲ್ಲು ಮತ್ತು ದಪ್ಪ ಮರಳಿನ ಪದರ ತುಂಬಿದ ನಂತರ ಅರ್ಧ ಕೊಳೆತ ಸಾವಯವ ಪದಾರ್ಧವನ್ನು ತುಂಬಿಸಿ 200-300 ಎರೆಹುಳವನ್ನು ಬಿಡಬೇಕು. ನಿರಂತರವಾಗಿ ಪಿಪಾಯಿಯೊಳಗೆ ನೀರು ತೊಟ್ಟಿಕ್ಕುತ್ತಿರಬೇಕು. ನಿರ್ಗಮನ ದ್ವಾರದಿಂದ ಹೊರಬರುವ ಎರೆದ್ರವ ಸಂಗ್ರಹಿಸಿ ಎಲೆಗೆ ಸಿಂಪಡಿಸಲು ಬಳಸಬೇಕು. ಅವಶ್ಯವಿದ್ದಲ್ಲಿ ತಂಪಾದ, ಕತ್ತಲೆ ಪ್ರದೇಶದಲ್ಲಿ ಶೇಖರಿಸಿಡಬೇಕು.
ಎರೆ ದ್ರಾವಣವನ್ನು ಎರೆಗೊಬ್ಬರ ಪಾತಿಯಿಂದ ಸಹ ತಯಾರಿಸಬಹುದು. ಇದಕ್ಕಾಗಿ ಕಾಂಕ್ರಿಟ್ ತಳಭಾಗ ಹೊಂದಿದ ತೊಟ್ಟಿಯನ್ನು ಇಳಿಜಾರಾಗಿ ನಿರ್ಮಿಸಬೇಕು. ಎರೆ ದ್ರಾವಣ ಸಂಗ್ರಹಿಸಲು ತೊಟ್ಟಿಗೆ 2 ರಿಂದ 2.5 ಇಂಚು ಅಗಲದ ಪಾಲಿವಿನೈಲ್ ಕೊಳವೆಯನ್ನು ಕೆಳಭಾಗದಲ್ಲಿ ಆಳವಡಿಸಬೇಕು. ಇದು ಅಗ್ಗದ ಕ್ರಮ ಮತ್ತು ವರ್ಷಪೂರ್ತಿ ಎರೆದ್ರಾವಣ ದೊರೆಯುತ್ತದೆ. ಎರೆದ್ರವ ಬಳಕೆಯಿಂದ ಗಿಡದ ಬೆಳವಣಿಗೆ ಮತ್ತು ಇಳುವರಿ ಸುಧಾರಿಸುತ್ತದೆ ಹಾಗು ಸಾವಯವ ಗೊಬ್ಬರ ತಯಾರಿಯಿಂದ ರಸಗೊಬ್ಬರದ ಮೇಲೆ ರೈತರು ಅವಲಂಬಿತವಾಗಿರುವುದನ್ನು ತಪ್ಪಿಸಬಹುದು.