ಕೊಯ್ಲಿನ ನಂತರ ಸಂಗ್ರಹಿಸಿದ ಕೃಷಿ ಉತ್ಪನ್ನಗಳ ನಿರ್ವಹಣೆ
ಸಂಗ್ರಹಿಸಿದ ಆಹಾರ ಧಾನ್ಯಗಳು ಮತ್ತು ಇತರ ಕೃಷಿ ಉತ್ಪನ್ನಗಳನ್ನು ಕೀಟಗಳು ನಾಶ ಮಾಡುವುದು ಹೊಸದೇನಲ್ಲ. ಆಹಾರ ಬೆಳೆಯಲು ಪ್ರಾರಂಭಿಸಿದ ದಿನದಿಂದಲೂ ರೈತ ಇದನ್ನು ಗಮನಿಸುತ್ತಲೇ ಬಂದಿದ್ದಾನೆ. ಸಾಂಪ್ರದಾಯಕ ವಿಧಾನಗಳಲ್ಲಿ ಉತ್ಪನ್ನಗಳನ್ನು ಸಂಗ್ರಹಿಸುವುದು ಮತ್ತು ಕಾಪಾಡುವುದು ಈಗಲೂ ಹಲವಾರು ದೇಶಗಳಲ್ಲಿ ಚಾಲ್ತಿಯಲ್ಲಿದೆ. ಇದರಿಂದ ಜನರಿಗೆ ಪುರಾತನ ಕಾಲದಿಂದಲೂ ಆಹಾರ ಸಂಗ್ರಹ ಮತ್ತು ರಕ್ಷಣೆ ಬಗ್ಗೆ ಅರಿವು ಇತ್ತು ಎಂದು ತಿಳಿದು ಬರುತ್ತದೆ.
ಸಂಗ್ರಹಣೆಯಲ್ಲಿ ಬಾಧಿಸುವ ಮುಖ್ಯ ಕೀಟಗಳೆಂದರೆ- ಅಕ್ಕಿ ಹುಳ, ಧಾನ್ಯ ಕೊರಕ, ಹಿಟ್ಟಿನ ಹುಳ, ಗರಗಸ ಹಲ್ಲಿನ ಧಾನ್ಯದ ಹುಳ, ಬೇಳೆಕಾಳಿನ ಪತಂಗ, ಅಕ್ಕಿ ಕಾಳಿನ ಪತಂಗ, ಮತ್ತು ಭತ್ತದ ಪತಂಗ ಮುಂತಾದವು.
ಎರಡು ಮೂಲಗಳಿಂದ ಕೀಟಗಳು ಉಗ್ರಾಣವನ್ನು ಸೇರುತ್ತವೆ. ಒಂದನೆಯದಾಗಿ ಕೃಷಿ ಭೂಮಿಯಿಂದ ಧಾನ್ಯ ಸಂಗ್ರಹಿಸುವಾಗ, ಎರಡನೆಯದಾಗಿ ಉಗ್ರಾಣದಲ್ಲಿ ಮೊದಲೇ ಇರುವ ಕೀಟಗಳು. ಕೀಟ ಪ್ರತಿಬಂಧಕ ಮತ್ತು ಕೀಟ ಪರಿಹಾರ ಕ್ರಮಗಳನ್ನು ಅನುಸರಿಸಿ ಕೊಯ್ಲುಮಾಡಿದ ಧಾನ್ಯವನ್ನು ಸಂಗ್ರಹಿಸಿಡಬೇಕು.
ಪ್ರತಿಬಂಧಕ ಕ್ರಮಗಳು
ಕೊಯ್ಲು ಪೂರ್ವ ಕ್ರಮ
ತೆನೆ ಧಾನ್ಯಗಳಾದ ಭತ್ತ, ಜೋಳ, ಗೋಧಿ ನವಣೆ ಮೊದಲಾದ ಬೆಳೆಗಳಿಗೆ ಕೊಯ್ಲಿಗಿಂತ ಹದಿನೈದು ದಿನಗಳ ಮುಂಚೆ ಶೇಕಡ 50ರ ಮೆಲಾಥಿಯಾನ್‍ನ್ನು (2 ಮಿಲಿ.ಲೀ) ಸಿಂಪಡಿಸಬೇಕು ಅಥವಾ ಶೇಕಡ 5ರ ಮೆಲಾಥಿಯಾನ್ ಪುಡಿ (10 ಕೆ.ಜಿ./ಎಕರೆ) ಎರಚಬೇಕು.
ಒಣಗಿಸುವುದು
ಶೇಕಡ 10-12ರ ತೇವಾಂಶದಲ್ಲಿ ಮತ್ತು ಉಗ್ರಾಣದ ಉಷ್ಣತೆ 65-750 ಎಫ್. ನಲ್ಲಿ ಹೆಚ್ಚಿನ ಧಾನ್ಯಗಳನ್ನು ಒಂದು ವರ್ಷದವರೆಗೆ ಯಾವುದೇ ತೊಂದರೆಯಿಲ್ಲದೆ ಶೇಖರಿಸಿಡಬಹುದು. 2 ವರ್ಷಕ್ಕಿಂತ ಹೆಚ್ಚು ಸಮಯ ಶೇಖರಣೆ ಮಾಡುವುದಾದರೆ ಧಾನ್ಯದ ತೇವಾಂಶವನ್ನು ಶೇಕಡ 8ಕ್ಕೆ ಇಳಿಸಬೇಕು. ಎಣ್ಣೆ ಬೀಜಗಳಾದ ಸೋಯಾಕಾಳು ಮತ್ತು ನೆಲಗಡಲೆ ಬೀಜವನ್ನು ಒಂದು ವರ್ಷ ಶೇಖರಿಸಿಡಲು ಧಾನ್ಯದ ತೇವಾಂಶ ಶೇಕಡ 8 ರಷ್ಟಿರಬೇಕು.
ಗಮನಿಸುವುದು
3-4 ತಿಂಗಳ ಕಡಿಮೆ ಅವಧಿಗೆ ಶೇಖರಣೆ ಮಾಡುವುದಾದರೆ ತಂಪಾಗಿಸುವುದು ಮತ್ತು ಒಣಗಿಸುವಿಕೆ ಇತರ ಕ್ರಮಗಳಾಗಿವೆ. ಆದರೆ ಇದು ಸಂಪೂರ್ಣ ಬದಲೀ ಕ್ರಮವಲ್ಲ. ತಂಪಾಗಿಸುವುದರಿಂದ ನೀರಿನಂಶವಿರುವ ಬೇಳೆ ಕಾಳುಗಳು ಮತ್ತು ಉಷ್ಣತೆ ಜಾಸ್ತಿಯಾದರೆ ಒಣಗಿದ ಧಾನ್ಯಗಳು ಬೇಗನೆ ಹಾಳಾಗುತ್ತದೆ. ಉಗ್ರಾಣದಲ್ಲಿ ಸಂಗ್ರಹಿಸಿದ ಯಾವುದೇ ಧಾನ್ಯಗಳನ್ನು ತಿಂಗಳಿಗೊಮ್ಮೆ ವೀಕ್ಷಿಸಿದಾಗ ಕೋಣೆಯ ತಾಪಮಾನಕ್ಕಿಂತ ಹೆಚ್ಚಿನ ಉಷ್ಣತೆ ಕಂಡು ಬಂದರೆ ಅಲ್ಲಿ ಸಂಗ್ರಹಿಸಿದ ಧಾನ್ಯ ಕೆಡುತ್ತಲಿದೆ ಮತ್ತು ಶಿಲೀಂದ್ರದ ಬೆಳವಣಿಗೆಯಾಗಿದೆ ಎಂದು ತಿಳಿಯಬೇಕು.
ನಿಯಂತ್ರಣ
ಹೊಗೆಯಾಡಿಸುವುದು: ಕೀಟ ಬಾಧೆಯಿದೆ ಎಂದು ಕಂಡು ಬಂದ ತಕ್ಷಣ ಈ ಕೆಳಗಿನ ರಾಸಾಯನಿಕಗಳನ್ನು ಬಳಸಿ ಸಂಗ್ರಹಾರದಲ್ಲಿ ಗಾಳಿಸೇರದಂತೆ ಹೊಗೆಯಾಡಿಸಬೇಕು
ಎ) ಈ.ಡಿ.ಬಿ. (ಎಥಿಲೀನ್ ಡೈ ಬ್ರೋಮೈಡ್) ಕ್ವಿಂಟಾಲ್ ಧಾನ್ಯಕೆ 3 ಮಿಲಿ ಯಂತೆ ಬಳಸಬೇಕು ಕಡಿಮೆಯೆಂದರೂ 7 ದಿನ ಧಾನ್ಯಗಳನ್ನು ಹೊಗೆಗೆ ತೆರೆದಿಡಬೇಕು
ಏ) ಅಲ್ಯುಮಿನಿಯಂ ಫಾಸ್ಪೈಡ್ 2 ಬಿಲ್ಲೆಗಳನ್ನು ಒಂದು ಟನ್ ಧಾನ್ಯಕೆ ಅಥವಾ 3 ಗ್ರಾಂ ಪ್ರತಿ ಟನ್ ಧಾನ್ಯಕ್ಕೆ 7 ದಿನಗಳವರೆಗೆ ಉಪಯೋಗಿಸಬೇಕು. ಕೋಣೆಯಲ್ಲಿ ಗಾಳಿ ನಿರ್ಬಂಧಿಸಿ ಹೊಗೆಯಾಡಬೇಕು. ವಾಸದ ಮನೆಗಳಲ್ಲಿ ರಾಸಾಯನಿಕವನ್ನು ಬಳಸಬಾರದು.
ಬ) ಹೊಗೆಯಾಡಿಸಿದ ಒಂದು ತಿಂಗಳ ನಂತರ ಶೇಕಡ 5ರ ಮೆಲಥಿಯಾನ್ ಪುಡಿಯನ್ನು ಧಾನ್ಯದ ಮೇಲೆ ಉದುರಿಸಬೇಕು.
ಮುನ್ನೆಚ್ಚರಿಕೆ: ಎಣ್ಣೆ ಬೀಜ ಮತ್ತು ಧಾನ್ಯದ ಹಿಟ್ಟುಗಳಿಗೆ ಹೊಗೆಯಾಡಿಸಬಾರದು.