ಚೆಪ್ಪುಡಿರ ಎಂ. ರಾಮಕೃಷ್ಣ, ಸಹಕಾರಿಗಳು: ತಿತಿಮತಿ. Thithimathi

Reading Time: 8 minutes

ಚೆಪ್ಪುಡಿರ ಎಂ. ರಾಮಕೃಷ್ಣ, ಸಹಕಾರಿಗಳು: ತಿತಿಮತಿ. Thithimathi

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಚೆಪ್ಪುಡಿರ ಎಂ. ರಾಮಕೃಷ್ಣರವರು  ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ಶಾಲಾ ದಿನಮಾನಗಳಲ್ಲಿ ತಿತಿಮತಿಯಲ್ಲಿ ಕಾರ್ಯಾಚರಿಸುತ್ತಿದ್ದ ಸಹಕಾರ ಸಂಘದ ಆವರಣದಲ್ಲಿ ಸುತ್ತಾಡುತ್ತಾ ಇರುವ ಸಂದರ್ಭ  ಸಹಕಾರ ಕ್ಷೇತ್ರದ ಬಗ್ಗೆ ಹಲವಾರು ಮಾಹಿತಿಗಳನ್ನು ತಿಳಿದುಕೊಂಡು ಸಹಕಾರ ಕ್ಷೇತ್ರದ ಬಗ್ಗೆ ಆಶಕ್ತಿ ಮೂಡಿ ರೈತರ ಹಾಗೂ ಸಾಮಾಜಿಕ ಸೇವೆ ಮಾಡುವ ಅಭಿಲಾಷೆಯಿಂದ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವುದಾಗಿ  ತಿಳಿಸಿದ್ದಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

2006ರಲ್ಲಿ ನಾಮ ನಿರ್ದೇಶನ ಸದಸ್ಯರಾಗಿ ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ  ಆಡಳಿತ ಮಂಡಳಿಗೆ ಪ್ರವೇಶ ಪಡೆದ ಇವರು, 2008ರಲ್ಲಿ ಮೊದಲ ಬಾರಿಗೆ ಸಂಘದ ಆಡಳಿತ ಮಂಡಳಿ  ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡು ಉಪಾಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ. 2013ರಲ್ಲಿ ನಡೆದ ಸಂಘದ ಚುನಾವಣೆಯಲ್ಲಿ ಮರು ಆಯ್ಕೆಗೊಂಡು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ತದ ನಂತರ 2018ರಲ್ಲಿ ನಡೆದ ಸಂಘದ ಚುನಾವಣೆಯಲ್ಲಿ ಮರು ಆಯ್ಕೆಗೊಂಡು ಎರಡನೇ ಬಾರಿಗೆ ಅಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. 1980 ರಲ್ಲಿ ಸಹಕಾರ ಸಂಘದಲ್ಲಿ ಸದಸ್ಯತ್ವವನ್ನು ಪಡೆದು ಕಳೆದ 42 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2020-21ರ ಸಾಲಿನಲ್ಲಿ ಸದಸ್ಯರಿಗೆ ನೀಡಲ್ಪಟ್ಟ ಸಾಲಗಳ ಶೇಕಡ 98%ರಷ್ಟು  ಮರುಪಾವತಿಯಾಗಿದ್ದು, ಸಂಘವು ಲಾಭದಲ್ಲಿ ನಡೆಯುತ್ತಿದೆ. ಇದಕ್ಕೆ ಹಲವಾರು ಕಾರಣವನ್ನು ನೀಡುವ ಶ್ರೀಯುತರು ಸಂಘದಿಂದ ಕೃಷಿ ಸಾಲ, ಆಭರಣ ಸಾಲ, ಜಾಮೀನು ಸಾಲ, ಪಿಗ್ಮಿ ಆಧಾರದ ಮೇಲೆ ಸಾಲ ನೀಡುತ್ತಿದ್ದು, ದಾಖಲೆ ಮಟ್ಟದಲ್ಲಿ ಗೊಬ್ಬರ ಮಾರಾಟವಾಗಿದ್ದು ಸರಿ ಸುಮಾರು 24,000 ಚೀಲಗಳು ಮಾರಾಟವಾಗಿದೆ ಎಂದರು. ಕೃಷಿ ಪರಿಕರಗಳ ಮಾರಾಟದಿಂದ ಲಾಭ, ಅಂಗಡಿ ಮಳಿಗೆಗಳಿಂದ ಲಾಭ, ನ್ಯಾಯಬೆಲೆ ಅಂಗಡಿಯಿಂದ ಬರುವ ಆದಾಯ, ಸಂಘದ ಅಧೀನದಲ್ಲಿರುವ ನಾಲ್ಕು ಎಕರೆಯಷ್ಟು ಕೃಷಿ ಪ್ರಾಂಗಣದಲ್ಲಿ ಕಾಫಿ, ಕರಿಮೆಣಸು ಬೆಳೆಗಳಿಂದ ಬರುತ್ತಿರುವ ಆದಾಯ ಹಾಗೂ ಸಂಘದ ದೇವರಪುರ ಶಾಖೆಯಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆ, ಕೃಷಿಪರಿಕರಗಳ ಮಾರಾಟ, ನ್ಯಾಯಬೆಲೆ ಅಂಗಡಿಯಿಂದ ಬರುವ ಆದಾಯದಿಂದಲೂ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಚೆಪ್ಪುಡಿರ ಎಂ. ರಾಮಕೃಷ್ಣರವರು ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ತಮ್ಮ ಅಧ್ಯಕ್ಷಾವಧಿಯಲ್ಲಿ ಆಡಳಿತ ಮಂಡಳಿ ಹಾಗೂ ಸಂಘದ ಸದಸ್ಯರ ಸಹಕಾರದೊಂದಿಗೆ ಸಂಘದ ಅಧೀನದಲ್ಲಿರುವ ಕೃಷಿ ಪ್ರಾಂಗಣದಲ್ಲಿ  ಗೋದಾಮು ನಿರ್ಮಾಣ, ಸಿಬ್ಬಂದಿ ವಸತಿ ಗೃಹ ನಿರ್ಮಾಣ, ಕೃಷಿ  ಪ್ರಾಂಗಣದಲ್ಲಿ ಅರಣ್ಯ ಇಲಾಖೆಯವರು ಅತಿಕ್ರಮಣ ಮಾಡಿ ತೋಡಿದ ಕಂದಕವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದು ಸಂಘ ಹಾಗೂ ಅರಣ್ಯ ಇಲಾಖೆ ಸೇರಿಕೊಂಡು ಜಂಟಿ ಸರ್ವೆ ಮಾಡಿ ಕೃಷಿ ಪ್ರಾಂಗಣದ ಹದ್ದುಬಸ್ತು ಸರ್ವೆಯನ್ನು ಮಾಡಿಸುವಲ್ಲಿ ಯಶಸ್ವಿಯಾದರು. ಹಾಗೆ ಕೃಷಿ ಪ್ರಾಂಗಣದಲ್ಲಿ ಅಂದಾಜು 10 ಲಕ್ಷ ವೆಚ್ಚದಲ್ಲಿ ಸಂಘದ ಸ್ವಂತ ಬಂಡವಾಳದಿಂದ ಕಾಫಿ ತೋಟ ನಿರ್ಮಾಣ, ಅದರ ಸುತ್ತ ಸೋಲಾರ್‌ ಬೇಲಿ, ಕೆರೆ ನಿರ್ಮಾಣ, ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣ, ಕಾಂಕ್ರೀಟ್ ರಸ್ತೆ, ಕಾಫಿ ಕಣ ನಿರ್ಮಾಣ  ಹಾಗೂ ಸುಸಜ್ಜಿತ ಗೋದಾಮು ನಿರ್ಮಾಣ ಮಾಡಿಸುವಲ್ಲಿ ಶ್ರಮವಹಿಸಿದ್ದಾರೆ.

ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಳೆಯ ಕಟ್ಟಡಗಳನ್ನು ಕೆಡವಿ ಅಂದಾಜು 82 ಲಕ್ಷ ವೆಚ್ಚದಲ್ಲಿ ಮೂರು ಅಂತಸ್ತಿನ ಆಡಳಿತ ಮಂಡಳಿ ಕಚೇರಿ, ಗೋದಾಮು ಹಾಗೂ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ, ಸಂಘದ ಆಡಳಿತವನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲಾಗಿದ್ದು,  ದೇವರಪುರ ಶಾಖೆಯಲ್ಲಿ ರಸಗೊಬ್ಬರ ಮಾರಾಟ, ಕೃಷಿ ಪರಿಕರಗಳ ಮಾರಾಟ, ಬ್ಯಾಂಕಿನ ಭದ್ರತಾ ದೃಷ್ಟಿಯಿಂದ ಸಿಸಿ ಕ್ಯಾಮರಾ ಹಾಗೂ ಸೈರನ್‌ ಅಳವಡಿಕೆ ಮಾಡಲಾಗಿದೆ ಎಂದರು. ಹಾಗೆ ದೇವರಪುರ ಶಾಖೆಯನ್ನು ಬ್ಯಾಂಕಿಂಗ್‌ ರೂಪದಲ್ಲಿ ಪರಿವರ್ತಿಸಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಗುಣಮಟ್ಟದ ರಸಗೊಬ್ಬರವನ್ನು ತಯಾರಿಕಾ ಘಟಕದಿಂದ ನೇರವಾಗಿ ಖರೀದಿಸಿ ರೈತರಿಗೆ  ನ್ಯಾಯಯುತ ಬೆಲೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ. ಸಂಘದಿಂದ ಸಾಲ ನೀಡಿಕೆಯಲ್ಲಿ ಹೆಚ್ಚಳ, ಸದಸ್ಯರಿಗೆ ಉತ್ತಮ ಸೇವೆ ನೀಡುವಲ್ಲಿ ಸಿಬ್ಬಂದಿಗಳ ಹೆಚ್ಚುವರಿ ನೇಮಕಾತಿ, ಅವರಿಗೆ ಉತ್ತಮ ಸವಲತ್ತುಗಳು ಹಾಗೂ ವೇತನ ಪರಿಷ್ಕರಣೆ ಮಾಡಲಾಗಿದೆ ಎಂದರು. ಸಂಘದ ವಾರ್ಷಿಕ ವಹಿವಾಟು ಕಳೆದ ಹತ್ತು ವರ್ಷಗಳಲ್ಲಿ 24 ಕೋಟಿಗಳಿಂದ 90 ಕೋಟಿಯಷ್ಟು ಅಧಿಕಗೊಂಡಿದ್ದು, ಸದಸ್ಯರಿಗೆ ಶೇಕಡ 25%ರಷ್ಟು ಡಿವಿಡೆಂಡ್‌ನ್ನು ಕಳೆದ ಹತ್ತು ವರ್ಷಗಳಿಂದ ನೀಡುತ್ತಾ ಬರಲಾಗಿದೆ  ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತಮ್ಮ ಮುಂದಿನ ಕ್ರಿಯಾಯೋಜನೆಗಳ ಬಗ್ಗೆ ವಿವರಿಸಿದ ಶ್ರೀಯುತರು, ಸಿಬ್ಬಂದಿಗಳಿಗೆ ಹಾಗೂ ಸದಸ್ಯರಿಗೆ ಪಿಂಚಣಿ ಯೋಜನೆ ರೂಪಿಸಲು ಪ್ರಯತ್ನ. ಯಶಶ್ವಿನಿ ಯೋಜನೆಯ ಆರೋಗ್ಯ ಕವಚ ರೀತಿಯಲ್ಲಿ ಆರೋಗ್ಯ ಸವಲತ್ತುಗಳು ನೀಡುವ ನಿಟ್ಟಿನಲ್ಲೂ ಪ್ರಯತ್ನಿಸಲಾಗುತ್ತಿದೆ ಎಂದರು. ಹಾಗೆ ಸಂಘದ 52 ಸೆಂಟ್‌ ಜಾಗದಲ್ಲಿ ವಾಣಿಜ್ಯ ಮಳಿಗೆಗಳು, ಸಭಾಂಗಣ ಮುಂತಾದ ಸವಲತ್ತುಗಳನೊಳಗೊಂಡ 4 ಅಂತಸ್ತಿನ ಬಹುಪಯೋಗಿ ಕಟ್ಟಡ  ನಿರ್ಮಾಣ ಮಾಡುವ  ನಿಟ್ಟಿನಲ್ಲಿ  ಯೋಜನೆ ರೂಪಿಸಲಾಗಿದೆ ಎಂದರು. ಹಾಗೆ ರೈತ ಉತ್ಪಾದಕ ಸಂಸ್ಥೆ(FPO) ಮಾದರಿಯಲ್ಲಿ ಕಾಫಿ, ಕರಿಮೆಣಸು, ಅಡಿಕೆ ದಾಸ್ತಾನು ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು, ಶಿರಸಿಯ TSS ಹಾಗೂ ಪುತ್ತೂರಿನ ಕ್ಯಾಂಪ್ಕೊಗೆ ಭೇಟಿ ನೀಡಿ ಅಧ್ಯಯನ ಪ್ರವಾಸ ಮಾಡಲಾಗಿದ್ದು, ಆ ಎರಡು ಸಂಸ್ಥೆಗಳ ಸಯೋಗದೊಂದಿಗೆ ವಹಿವಾಟು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಶಾಲೆಗಳು, ಪೊಲೀಸ್ ಠಾಣೆ, ಗ್ರಾಮಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸೌಲಭ್ಯಗಳು ಮತ್ತು ದೇಣಿಗೆಗಳನ್ನು ಒದಗಿಸುವಲ್ಲಿ ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸಮಾಜಮುಖಿ ಕಾರ್ಯಗಳಿಗೆ ತನ್ನ ಸಹಭಾಗಿತ್ವವನ್ನು ವಹಿಸುತ್ತಿದೆ. ಅಲ್ಲದೆ ಪ್ರಧಾನ ಮಂತ್ರಿ ಪರಿಹಾರ ನಿಧಿ, ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಸಮಾಜಕ್ಕೆ ಸ್ವಯಂಪ್ರೇರಿತ ಕೊಡುಗೆಯಾಗಿ 2018ರಲ್ಲಿ ಸಂಭವಿಸಿದ ಕೊಡಗು ನೈಸರ್ಗಿಕ ವಿಕೋಪಕ್ಕೆ 5 ಲಕ್ಷಗಳ ದೇಣಿಗೆ ನೀಡಲಾಗಿದೆ. ಹಾಗೆ ಸಂಘವು ಸಹಕಾರ ಕ್ಷೇತ್ರದ ಬಗ್ಗೆ ಸೆಮಿನಾರ್ ಮತ್ತು ಪ್ರಾತ್ಯಕ್ಷಿಕೆಗಳನ್ನು ನಡೆಸುತ್ತಾ ಬರುತ್ತಿದ್ದು, ಪ್ರತಿ ವರ್ಷ ಸಂಘದ ಸಭಾಂಗಣದಲ್ಲಿ ವಿವಿಧ ಕೃಷಿ ಸಂಬಂಧಿತ ಚಟುವಟಿಕೆಗಳು ಹಾಗೂ ವಿಚಾರ ಸಂಕೀರ್ಣಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು  ತಿಳಿಸಿದರು.

ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ತಿಳಿಸಿದ  ಶ್ರೀಯುತರು, “ತಾನು ಪರರಿಗೆ-ಪರರರು ತನಗೆ” ಎಂಬ ಸಹಕಾರ ತತ್ವದಂತೆ ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪವಿರಬಾರದು, ಸರ್ಕಾರದ ಮಾರ್ಗದರ್ಶನ ಮಾತ್ರ ಇರಬೇಕು, ಆಡಳಿತ ಮಂಡಳಿಗೆ ಆಂತರಿಕ ಸ್ವಾತಂತ್ರ್ಯ ನೀಡಬೇಕು ಎಂದು ಅಭಿಪ್ರಾಯಪಟ್ಟಿರುವ ಇವರು, ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದರು. ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಬಹುಮತದ ಬದಲು ಸರ್ವಾನುಮತ ಸಹಕಾರ ಕ್ಷೇತ್ರದಲ್ಲಿ ಇರಬೇಕು  ಎಂದು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ರಾಜಕೀಯ ರಹಿತವಾಗಿ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಭಾವಿ ಯುವಶಕ್ತಿಗೆ ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.

ಶೈಕ್ಷಣಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಕೊಂಡಿರುವ ಚೆಪ್ಪುಡಿರ ರಾಮಕೃಷ್ಣರವರು ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾಗಿ ಸೇವೆ. ತಿತಿಮತಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಸೇವೆ. ತಿತಿಮತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಮೂಲತಃ ಕೃಷಿಕರಾಗಿರುವ ಚೆಪ್ಪುಡಿರ ರಾಮಕೃಷ್ಣರವರು ಪ್ರಸ್ತುತ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನೊಕ್ಯಾ ಸಿದ್ದಾಪುರ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಸಹಕಾರ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 31-01-2022

Search Coorg Media

Coorg’s Largest Online Media Network

“ಸರ್ಚ್‌ ಕೂರ್ಗ್‌ ಮೀಡಿಯಾ”

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.
 

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.